ರಾಜಕೀಯ

ಯಾವುದೇ ಕಾರಣಕ್ಕೂ ಅಪವಿತ್ರ ಮೈತ್ರಿಗೆ ಅನುವು ಮಾಡಿಕೊಡುವುದಿಲ್ಲ: ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಸ್ಪಷ್ಟನೆ

ಶ್ರೀನಗರ: ತಮಗೆ ಮುಫ್ತಿ ಮೆಹಬೂಬಾ ಅವರು ಮಾಡಿದ್ದ ಫ್ಯಾಕ್ಸ್ ಪ್ರತಿ ಸಿಕ್ಕಿದ್ದರೂ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇರುತ್ತಿರಲಿಲ್ಲ. ತಾವು ಎಂದಿಗೂ ಅಪವಿತ್ರ ಮೈತ್ರಿಗೆ ಅನುವು ಮಾಡಿಕೊಡುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು ಹೇಳಿದ್ದಾರೆ.
ಪಿಡಿಪಿ ಮತ್ತು ಎನ್ ಸಿ ಮೈತ್ರಿ ಬೆನ್ನಲ್ಲೇ ಕಾಶ್ಮೀರ ವಿಧಾನಸಭೆ ವಿಸರ್ಜಿಸಿ ಇದೀಗ ಸುದ್ದಿಯ ಕೇಂದ್ರ ಬಿಂದುವಾಗಿರುವ ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಮುಫ್ತಿ ಮೆಹಬೂಬಾ ಅವರು ಸರ್ಕಾರ ರಚನೆಗಾಗಿ ಫಾಕ್ಸ್ ಮೂಲಕ ಕಳುಹಿಸಿದ್ದ ಹಕ್ಕು ಮಂಡನೆ ಪತ್ರ ತಮ್ಮ ಕೈ ಸೇರಿದ್ದರೂ ತಮ್ಮ ನಿರ್ಧಾರದಲ್ಲಿ ಯಾವುದೇ ರೀತಿಯ ಬದಲಾವಣ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ. ಕಳೆದ 15 ದಿನಗಳ ಹಿಂದೆಯೇ ಶಾಸಕರ ಕುದುರೆ ವ್ಯಾಪಾರದ ಕುರಿತು ನನಗೆ ಮಾಹಿತಿ ಬಂದಿತ್ತು. ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದವು. ಪ್ರಸ್ತುತ ಸರ್ಕಾರ ರಚನೆಗೆ ಹಕ್ಕೊತ್ತಾಯ ಮಾಡಿರುವ ಇದೇ ಮೆಹಬೂಬಾ ಮುಫ್ತಿ ಅವರು ಶಾಸಕರಿಗೆ ಬರುತ್ತಿರುವ ಬೆದರಿಕೆ ಕುರಿತು ತಮಗೆ ದೂರು ನೀಡಿದ್ದರು. ಅಂತೆಯೇ ನ್ಯಾಷನಲ್ ಕಾನ್ಱರೆನ್ಸ್ ಪಕ್ಷ ಶಾಸಕರಿಗೆ  ಹಣ ನೀಡಿದ ಕುರಿತು ಮತ್ತು ಬೆದರಿಕೆ ತಂತ್ರಗಳ ಮೂಲಕ ಶಾಸಕ ಸೆಳೆಯುವ ಯತ್ನ ಮಾಡುತ್ತಿರುವ ಕುರಿತು ದೂರು ಬಂದಿತ್ತು. ಹೀಗಾಗಿ ಈ ಅಪವಿತ್ರ ಮೈತ್ರಿಗೆ ನಾನು ಆಸ್ಪದ ನೀಡದೇ ವಿಧಾನಸಭೆಯನ್ನು ವಿಸರ್ಜಿಸಿದ್ದೇನೆ ಎಂದು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.
ನಿನ್ನೆ ಈದ್ ಮಿಲಾದ್ ಹಬ್ಬವಿದ್ದು, ರಾಜಭವನದಲ್ಲಿ ತಮಗೆ ಆಹಾರ ನೀಡಲೂ ಕೂಡ ಯಾರೂ ಇರಲಿಲ್ಲ. ಒಂದು ದಿನ ಮುಂಚಿತವಾಗಿಯೇ ಮುಫ್ತಿ ಮೆಹಬೂಬಾ ಅವರನ್ನು ತಮ್ಮನ್ನು ಭೇಟಿ ಮಾಡಬಹುದಿತ್ತು ಎಂದು ರಾಜ್ಯಪಾಲರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment