ಕ್ರೀಡೆ

ಯುಪಿ ಯೋಧಾ ವಿರುದ್ಧ ಪಟನಾಗೆ ಸತತ 2ನೇ ಜಯ

ಸೋನೆಪತ್: ಶ್ರೀಕಾಂತ್ ಜಾಧವ್(17 ಅಂಕ) ಸೂಪರ್ ರೈಡ್ ನಿರ್ವಹಣೆಯ ಹೊರತಾಗಿಯೂ ಯುಪಿ ಯೋಧಾ ತಂಡ ಪ್ರೊ ಕಬಡ್ಡಿ ಲೀಗ್​ನಲ್ಲಿ ಹಾಲಿ ಚಾಂಪಿಯನ್ ಪಟನಾ ಪೈರೇಟ್ಸ್ ತಂಡದ ವಿರುದ್ಧ ಸತತ 2ನೇ ಸೋಲನುಭವಿಸಿತು. ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್(14) ಉತ್ತಮ ಆಟದಿಂದ ಪಟನಾ ಭಾನುವಾರ ನಡೆದ ಪಂದ್ಯದಲ್ಲಿ 43-37ರಿಂದ ಯುಪಿ ಯೋಧಾ ತಂಡವನ್ನು ಸೋಲಿಸಿತು.

ಚೆನ್ನೈ ಚರಣದಲ್ಲಿ ಪಟನಾ ಎದುರು 2 ಪಾಯಿಂಟ್​ನಿಂದ ವೀರೋಚಿತವಾಗಿ ಸೋತಿದ್ದ ಯೋಧಾ ಪಂದ್ಯದಲ್ಲಿ ಒಂದು ಹಂತದಲ್ಲಿ ಮೇಲುಗೈ ಸಾಧಿಸಿದ್ದರೂ ಶ್ರೀಕಾಂತ್​ಗೆ ಗಾಯವಾಗಿದ್ದು ಹಿನ್ನಡೆಯಾಯಿತು. ಆರಂಭದಲ್ಲಿ ಪುಣೆಗಿಂತ ಆಕ್ರಮಣಕಾರಿ ಆಟಕ್ಕಿಳಿದ ಯೋಧಾ 6-1ರ ಉತ್ತಮ ಮುನ್ನಡೆಯಿಂದ ಗಮನ ಸೆಳೆಯಿತು. ಇದರಿಂದ 3 ನಿಮಿಷದೊಳಗೆ ಪಟನಾ ಆಲೌಟ್ ಆಗುವ ಹಿನ್ನಡೆ ಎದುರಿಸಿತು. ನಂತರ ಪಟನಾ ಡಿಫೆಂಡರ್​ಗಳ ಅತ್ಯುತ್ತಮ ಟ್ಯಾಕಲ್ ಮೂಲಕ ಲಯಕ್ಕೆ ಮರಳಿತಲ್ಲದೆ 13ನೇ ನಿಮಿಷದಲ್ಲಿ ಯೋಧಾ ಅನ್ನು ಆಲೌಟ್ ಮಾಡಿ 16-10ರ ಮುನ್ನಡೆ ಕಂಡಿತು. ಆದರೆ ಮೊದಲಾರ್ಧ ಅವಧಿಯ ಕೊನೇ ನಿಮಿಷದಲ್ಲಿ ಸೂಪರ್ ರೈಡ್ ಮಾಡಿದ ಶ್ರೀಕಾಂತ್ ಜಾಧವ್ ಯೋಧಾಗೆ ಅಮೂಲ್ಯ 3 ಪಾಯಿಂಟ್ ತರುವ ಮೂಲಕ ಹಿನ್ನಡೆಯನ್ನು 17-19ಕ್ಕೆ ಇಳಿಸಿದರು. ದ್ವಿತೀಯಾರ್ಧದಲ್ಲಿ ಶ್ರೀಕಾಂತ್ ತೋರಿದ ಮತ್ತೊಂದು 4 ಅಂಕಗಳ ಸೂಪರ್ ರೈಡ್ ನೆರವಿನಿಂದ ಯೋಧಾ 24-24ರ ಸಮಬಲ ಸಾಧಿಸಿತು. ಆದರೆ ಈ ವೇಳೆ ಶ್ರೀಕಾಂತ್ ಗಾಯಗೊಂಡಿದ್ದು ಯೋಧಾಗೆ ಹಿನ್ನಡೆಯಾಯಿತು.

ಪುಣೇರಿ ಪಲ್ಟಾನ್​ಗೆ ಜಯ: ದಿನದ 2ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡ 47-25 ಅಂಕಗಳಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಸೋಲಿಸಿತು. ಇದು ಹರಿಯಾಣಕ್ಕೆ ತವರಿನಲ್ಲಿ ಸತತ 3ನೇ ಸೋಲಾಗಿದೆ. ಪುಣೇರಿ ತಂಡಕ್ಕೆ ನಾಯಕ ನಿತಿನ್ ತೋಮರ್ 10 ಅಂಕ ಸಂಪಾದಿಸಿ ಜಯಕ್ಕೆ ನೆರವಾದರು.

About the author

ಕನ್ನಡ ಟುಡೆ

Leave a Comment