ರಾಷ್ಟ್ರ ಸುದ್ದಿ

ಯುರೋಪ್​ ಪ್ರವಾಸದ ಬಳಿಕ ಸ್ವದೇಶಕ್ಕೆ ಬಂದಿಳಿದ ಪ್ರಧಾನಿ ಮೋದಿ

ನವದೆಹಲಿ: ಐದು ದಿನಗಳ ಯುರೋಪ್​ ಪ್ರವಾಸದ ಬಳಿಕ ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ನವದೆಹಲಿಗೆ ಬಂದಿಳಿದಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೂಗುಚ್ಛ ನೀಡಿ ಸ್ವಾಗತಿಸಿದರು.

ಏಪ್ರಿಲ್‌ 17 ರಿಂದ ಪ್ರಧಾನಿ ಮೋದಿ ಸ್ವೀಡನ್​, ಇಂಗ್ಲೆಂಡ್​​, ಜರ್ಮನಿ ರಾಷ್ಟ್ರಗಳ ಪ್ರವಾಸ ಕೈಗೊಂಡು ಇಂದು ಭಾರತಕ್ಕೆ ಹಿಂದಿರುಗಿದ್ದಾರೆ.ಏ. 16, 17ರಂದು ಇದೇ ಮೊದಲ ಬಾರಿಗೆ ಸ್ವೀಡನ್‌ ಪ್ರಧಾನಿ ಸ್ಟೀಫನ್‌ ಲೋಫೆಲ್‌ ಅವರ ಆಮಂತ್ರಣದ ಹಿನ್ನೆಲೆಯಲ್ಲಿ ಸ್ವೀಡನ್‌ಗೆ ಭೇಟಿ ನೀಡಿದ್ದ ಮೋದಿ, ಭಾರತ-ನಾರ್ಡಿಕ್‌ ಶೃಂಗಸಭೆಯಲ್ಲಿ ಭಾಗವಹಿಸಿ, ಸ್ವೀಡನ್‌ನ ಆಯ್ದ ಬ್ಯುಸಿನೆಸ್‌ ಲೀಡರ್ಸ್‌ನ್ನು ಉದ್ದೇಶಿಸಿ ಮಾತನಾಡಿದರು. ಏಪ್ರಿಲ್‌ 17ರಿಂದ 20 ರಂದು ಇಂಗ್ಲೆಂಡ್‌ಗೆ ಭೇಟಿ ನೀಡಿ ಲಂಡನ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಸಭೆಯಲ್ಲಿ ಪಾಲ್ಗೊಂಡ ನಂತರ ಬ್ರಿಟನ್‌ನಲ್ಲಿ ಕಾಮನ್‌ವೆಲ್ತ್‌ ರಾಷ್ಟ್ರಗಳ ಮುಖ್ಯಸ್ಥರ ಜತೆ ದ್ವೀಪಕ್ಷೀಯ ಮಾತುಕತೆಗಳಲ್ಲಿ ಭಾಗವಹಿಸಿದ್ದರು.

ಇದಾದ ನಂತರ ಜರ್ಮನಿಗೆ ಭೇಟಿ ನೀಡಿದ ಮೋದಿ ಬರ್ಲಿನ್‌ನಲ್ಲಿ ಚಾನ್ಸಲರ್‌ ಏಂಜೆಲಾ ಮಾರ್ಕೆಲ್‌ ಅವರು ಆಯೋಜಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡ ಬಳಿಕ, ಉಭಯ ನಾಯಕರು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿ, ಆರ್ಥಿಕತೆ ಬೆಳವಣಿಗೆ ಬಗ್ಗೆ ಚರ್ಚಿಸಿದರು. ಮಾರ್ಕೆಲ್‌ ನಾಲ್ಕನೇ ಬಾರಿಗೆ ಚಾನ್ಸೆಲರ್‌ ಆಗಿ ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಇದೇ ಮೊದಲ ಬಾರಿಗೆ ಉಭಯ ನಾಯಕರ ಭೇಟಿ ಇದಾಗಿತ್ತು.

About the author

ಕನ್ನಡ ಟುಡೆ

Leave a Comment