ರಾಷ್ಟ್ರ ಸುದ್ದಿ

ರಂಗನ್‌ ವರದಿಯಲ್ಲಿ ಯಾವುದೇ ಭಾಷೆಯ ಕಡ್ಡಾಯ ಕಲಿಕೆಯ ಪ್ರಸ್ತಾಪವಿಲ್ಲ: ಜಾವಡೇಕರ್‌

ಹೊಸದಿಲ್ಲಿ: ರಾಷ್ಟ್ರಾದ್ಯಂತ 8ನೇ ತರಗತಿ ವರೆಗೆ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾಪದ ಬಗ್ಗೆ ವರದಿಯಾದ ಬೆನ್ನಲ್ಲೇ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ನಿರಾಕರಿಸಿದ್ದಾರೆ. ಕೆ ಕಸ್ತೂರಿರಂಗನ್‌ ಸಮಿತಿ ಸಿದ್ಧಪಡಿಸಿದ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಕರಡಿನಲ್ಲಿ ಹಿಂದಿ ಕಲಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂಬ ವರದಿ ಕೆಲವು ರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಪ್ರಕಾಶ್‌ ಜಾವಡೇಕರ್‌ ಸ್ಪಷ್ಟನೆ ನೀಡಿದ್ದಾರೆ.ಹೊಸ ಶಿಕ್ಷಣ ನೀತಿಯ ಕರಡಿನಲ್ಲಿ ಯಾವುದೇ ಭಾಷೆಯ ಕಲಿಕೆಯನ್ನು ಕಡ್ಡಾಯ ಮಾಡುವ ಬಗ್ಗೆ ಪ್ರಸ್ತಾಪ ಇಲ್ಲ. ಸುದ್ದಿವಾಹಿನಿಗಳು ತಪ್ಪಾಗಿ ಸುದ್ದಿ ಮಾಡಿವೆ ಎಂದು ಟ್ವೀಟ್‍‌ ಮಾಡಿದ್ದಾರೆ. ಪ್ರಸ್ತುತ ಹಿಂದಿ ಮಾತನಾಡದ ರಾಜ್ಯಗಳ ಶಾಲೆಗಳಲ್ಲಿ ಹಿಂದಿ ಕಲಿಕೆ ಕಡ್ಡಾಯವಲ್ಲ. ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಗೋವ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತಿತರ ರಾಜ್ಯಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸುತ್ತಿಲ್ಲ.

ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಪ್ರಕಾರ ಹೊಸ ಶಿಕ್ಷಣ ನೀತಿ ಕರಡಿನಲ್ಲಿ ಭಾರತ ಕೇಂದ್ರಿತ ಮತ್ತು ವೈಜ್ಞಾನಿಕ ಶಿಕ್ಷಣ ನೀಡುವ ಬಗ್ಗೆ ಪಟ್ಟಿ ಮಾಡಲಾಗಿದೆ. 5ನೇ ತರಗತಿ ವರೆಗೆ ಸ್ಥಳೀಯ ಭಾಷೆಗಳಲ್ಲೇ ಶಿಕ್ಷಣ ಅಭಿವೃದ್ಧಿಗೆ ಮಹತ್ವ ನೀಡುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಅವಧ್‌, ಭೋಜ್‌ಪುರಿ, ಮೈಥಿಲಿಯಂತಹ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ಸಿಗಲಿದೆ.

ಹಿಂದಿ ಹೇರಿಕೆ ಬಗ್ಗೆ ಕಿಡಿಕಾರಿರುವ ಡಿಎಂಕೆ ಮುಖಂಡ ಎ ಸರವನನ್‌, ಪ್ರತಿ ಬಾರಿ ಬಿಜೆಪಿ ನೇತೃತ್ವದ ಸರಕಾರ ತ್ರಿವಳಿ ಭಾಷಾ ನೀತಿ ಹೇರಿಕೆಗೆ ಯತ್ನಿಸುತ್ತದೆ. ನಾವು ಇದನ್ನು ವಿರೋಧಿಸುತ್ತೇವೆ. ತ್ರಿವಳಿ ಭಾಷಾ ನೀತಿ ಸರಿಯಲ್ಲ. ಮಾತೃಭಾಷೆಯೇ ನಮಗೆ ಎಲ್ಲ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಟಿಡಿಪಿ ಮುಖಂಡ ಲಂಕ ದಿನಕರ್‌ ಮಾತನಾಡುತ್ತ, ಕಡ್ಡಾಯ ಎಂದು ಸಮಾಜಕ್ಕೆ ಸೂಕ್ತವಲ್ಲ. ಸ್ಥಳೀಯ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಬೇರೆ ಭಾಷೆಯಿಂದ ಕಲಿಸುವುದರಿಂದ ವಿದ್ಯಾರ್ಥಿಗಳಿಗೆ ವಿಷಯದ ಅಂತರಾಳ ಅರ್ಥವಾಗುವುದಿಲ್ಲ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment