ರಾಷ್ಟ್ರ ಸುದ್ದಿ

ರಫೆಲ್ ಒಪ್ಪಂದ ಬಗ್ಗೆ ಮಾಧ್ಯಮ ವರದಿ ಸತ್ತ ಕುದುರೆಯನ್ನು ಬಡಿದೆಬ್ಬಿಸುವ ರೀತಿಯಲ್ಲಿದೆ: ರಕ್ಷಣಾ ಸಚಿವೆ

ನವದೆಹಲಿ: ರಫೆಲ್ ಯುದ್ಧ ವಿಮಾನ ಒಪ್ಪಂದದ ಬಗ್ಗೆ ಮಾಧ್ಯಮ ವರದಿಯನ್ನು ‘ಸತ್ತ ಕುದುರೆಯನ್ನು ಬಡಿದೆಬ್ಬಿಸುವ’ ರೀತಿಯಲ್ಲಿದೆ ಎಂದು ಟೀಕಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ವಿರೋಧ ಪಕ್ಷಗಳು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಪಾಶ್ಚಾತ್ಯ ಹಿತಾಸಕ್ತಿಗಳ ಕೈಗೊಂಬೆಯಾಗಿವೆ ಎಂದು ಆರೋಪಿಸಿದರು.

ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಪ್ರಧಾನಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ಮಾಧ್ಯಮದಲ್ಲಿ ಬಂದ ವರದಿ ಹಿನ್ನಲೆಯಲ್ಲಿ ಇಂದು ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗೆ ಸದನದಲ್ಲಿ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಪ್ರತಿಪಕ್ಷಗಳು ಸತ್ತ ಕುದುರೆಯನ್ನು ಬಡಿದೆಬ್ಬಿಸುತ್ತಿದೆ.

ರಫೆಲ್ ಯುದ್ಧ ವಿಮಾನ ಒಪ್ಪಂದದ ಕುರಿತು ನಿಯಮಿತವಾಗಿ ಕಾಲಕಾಲಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯ ವಿಚಾರಿಸುತ್ತಿದ್ದರೆ ಅದನ್ನು ಒಪ್ಪಂದದಲ್ಲಿ ಮೂಗುತೂರಿಸುವಿಕೆ ಎಂದು ಹೇಳಲು ಸಾಧ್ಯವಿಲ್ಲ ಎಂದರು. ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಪಾಶ್ಚಾತ್ಯ ಹಿತಾಸಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ವಿರೋಧ ಪಕ್ಷಗಳು ಭಾರತೀಯ ವಾಯುಪಡೆಯ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ ಎಂದು ಆಪಾದಿಸಿದರು.

ರಫೆಲ್ ಒಪ್ಪಂದದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದ ಮಧ್ಯಪ್ರವೇಶಕ್ಕೆ ಮತ್ತು ಫ್ರಾನ್ಸ್ ಕಂಪೆನಿಗಳೊಂದಿಗೆ ಅಕ್ರಮವಾಗಿ ಬೆಲೆ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂದು ಅಂದಿನ ರಕ್ಷಣಾ ಕಾರ್ಯದರ್ಶಿಗಳು ಆರೋಪಿಸಿದ್ದರು ಎಂದು ಪತ್ರಿಕೆಯಲ್ಲಿ ಬಂದ ವರದಿ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಒಪ್ಪಂದ ಸರಿದಾರಿಯಲ್ಲಿಯೇ ಸಾಗುತ್ತಿದ್ದು ಅಧಿಕಾರಿಗಳು ತಾಳ್ಮೆಯಿಂದಿರುವಂತೆ ಅಂದಿನ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದರು ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಪ್ರಧಾನ ಮಂತ್ರಿ ಕಾರ್ಯಾಲಯವನ್ನು ನಡೆಸಿಕೊಂಡು ಹೋಗುತ್ತಿದ್ದರು, ಹಾಗಾದರೆ ಅದು ಮೂಗುತೂರಿಸುವಿಕೆಯಾಗುವುದಿಲ್ಲವೇ ಎಂದು ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು.

About the author

ಕನ್ನಡ ಟುಡೆ

Leave a Comment