ರಾಷ್ಟ್ರ ಸುದ್ದಿ

ರಫೇಲ್ ಪ್ರಕರಣದ ತನಿಖೆಗೆ ಸುಪ್ರೀಂ ನಕಾರ: ಕೇಂದ್ರಕ್ಕೆ ಬಿಗ್ ರಿಲೀಫ್

ನವದೆಹಲಿ:ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ಆರೋಪ ಕುರಿತಂತೆ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ತಿರಸ್ಕರಿಸಿದ್ದು, ರಫೇಲ್ ಪ್ರಕರಣದ ತನಿಖೆ ಅಗತ್ಯವಿಲ್ಲ ಎಂದು ತೀರ್ಪು ನೀಡುವ ಮೂಲಕ ಕೇಂದ್ರಕ್ಕೆ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ ನ.14ರಂದು ತೀರ್ಪು ಕಾಯ್ದಿರಿಸಿತ್ತು. ವಕೀಲ ಎಂ.ಎಲ್.ಶರ್ಮಾ ರಫೇಲ್ ಯುದ್ಧ ವಿಮಾನ ಖರೀದಿ ಅವ್ಯವಹಾರದ ಸಂಬಂಧ ಮೊದಲು ಪ್ರಕರಣ ದಾಖಲಿಸಿದ್ದು, ನಂತರ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ನಾ, ಅರುಣ್ ಶೌರಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ದೂರು ಸಲ್ಲಿಸಿದ್ದರು.

ಸುಪ್ರೀಂ ಹೇಳಿರುವುದೇನು:

1)ರಫೇಲ್ ಡೀಲ್ ನಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಲ್ಲ

2)ರಫೇಲ್ ಡೀಲ್ ನ ವಿಸ್ತ್ರತ ಪರಿಶೀಲನೆ ಅಗತ್ಯವಿಲ್ಲ

3)ಯುದ್ಧ ವಿಮಾನದ ಬೆಲೆ ಮಾಹಿತಿ ಅಗತ್ಯವಿಲ್ಲ, ರಫೇಲ್ ಒಪ್ಪಂದದಲ್ಲಿ ಸಂದೇಹವೇ ಇಲ್ಲ

4)ಎಲ್ಲಾ ರಕ್ಷಣಾ ಒಪ್ಪಂದಗಳ ವಿಮರ್ಶೆ ಅಸಾಧ್ಯ

5)ರಫೇಲ್ ಯುದ್ಧ ವಿಮಾನದ ಗುಣಮಟ್ಟದ ಬಗ್ಗೆ ಅನುಮಾನವಿಲ್ಲ

ರಫೇಲ್ ಖರೀದಿ ದೇಶದ ದೊಡ್ಡ ಹಗರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸಿದ್ದವು. 2012ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್ ತಂತ್ರಜ್ಞಾನ ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಎಚ್ ಎಎಲ್ ಸಹಭಾಗಿತ್ವದಲ್ಲಿ ತಯಾರಿಸುವ ಪ್ರಸ್ತಾಪವನ್ನು ಇಡಲಾಗಿತ್ತು.

ಫ್ರಾನ್ಸ್ ನಿಂದ 18 ಯುದ್ಧ ವಿಮಾನಗಳನ್ನು ಖರೀದಿಸಿ, ಎಚ್ ಎಎಲ್ ನಿಂದ 108 ಯುದ್ಧ ವಿಮಾನ ತಯಾರಿಸಲು ಯುಪಿಎ ಉದ್ದೇಶಿಸಿತ್ತು. ಅದರಂತೆ ಪ್ರತಿ ಯುದ್ಧ ವಿಮಾನಕ್ಕೆ 526 ಕೋಟಿ ವೆಚ್ಚವಾಗುತ್ತಿತ್ತು ಎಂದು ಕಾಂಗ್ರೆಸ್ ಹೇಳಿತ್ತು.

ಬಳಿಕ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಯುಪಿಎ ಸರ್ಕಾರದ ಯೋಜನೆ ಕೈಬಿಟ್ಟು, ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ಕಂಪನಿಯಿಂದ 36 ಯುದ್ಧ ವಿಮಾನ ಖರೀದಿಸಲು ತೀರ್ಮಾನಿಸಿತ್ತು. ಪ್ರತಿ ವಿಮಾನಕ್ಕೆ 1670 ಕೋಟಿ ವೆಚ್ಚವಾಗುವುದಾಗಿ ಆರೋಪಿಸಿದ್ದ ಕಾಂಗ್ರೆಸ್ ಇದೊಂದು ದೊಡ್ಡ ಹಗರಣ ಎಂದು ದೂರಿತ್ತು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಉದ್ಯಮಿ ಅನಿಲ್ ಅಂಬಾನಿ ಕೂಡಾ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದರು. ಇದೀಗ ಸುಪ್ರೀಂಕೋರ್ಟ್ ತೀರ್ಪನಿಂದ ಕಾಂಗ್ರೆಸ್ ಹಾಗೂ ಅರ್ಜಿದಾರರಿಗೆ ಹಿನ್ನಡೆಯಾದಂತಾಗಿದೆ.

 

About the author

ಕನ್ನಡ ಟುಡೆ

Leave a Comment