ರಾಷ್ಟ್ರ ಸುದ್ದಿ

ರಫೇಲ್ ವಿವಾದ: ನಮ್ಮಿಬ್ಬರ ನಡುವಿನ ಸಂಭಾಷಣೆ ಬಹಿರಂಗಪಡಿಸಿಲ್ಲ, ಪರಿಕ್ಕರ್ ಗೆ ರಾಹುಲ್

ಪಣಜಿ: ನಮ್ಮಿಬ್ಬರ ನಡುವಿನ ಸಂಭಾಷಣೆಯನ್ನು ನಾನು ಬಹಿರಂಗಪಡಿಸಿಲ್ಲ, ಸಾರ್ವಜನಿಕ ವಲಯದಲ್ಲಿರುವ ಮಾಹಿತಿ ಹಂಚಿಕೊಂಡಿದ್ದೇನೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರಿಗೆ ಗುರುವಾರ ಹೇಳಿದ್ದಾರೆ.
ಕಳೆದ ಮಂಗಳವಾರ ರಾಹುಲ್ ಆವರು ಪರಿಕ್ಕರ್ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಆವರು, ಇದು ವೈಯಕ್ತಿಕ ಎಂದು ಹೇಳಿದ್ದರು. ಆದರೆ, ಬಳಿಕ ಕೇರಳದಲ್ಲಿ ಮಾಡಿದ್ದ ಭಾಷಣವೊಂದರಲ್ಲಿ ಪ್ರಧಾನಿ ಮೋದಿ ಮಾಡಿಕೊಂಡ ಅನಿಲ್ ಅಂಬಾನಿಗೆ ಲಾಭ ತಂದುಕೊಡುವ ಹೊಸ ಒಪ್ಪಂದದಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಪರಿಕ್ಕರ್ ಹೇಳಿದ್ದಾರೆಂದು ಹೇಳಿದ್ದರು.
ಈ ಹಿನ್ನಲೆಯಲ್ಲಿ ರಾಹುಲ್ ಅವರಿಗೆ ಪತ್ರ ಬರೆದಿದ್ದ ಪರಿಕ್ಕರ್ ಅವರು, ಬೇಸರ ವ್ಯಕ್ತಪಡಿಸಿದ್ದರು. ರಾಹುಲ್ ಅವರು ತಮ್ಮ ಆರೋಗ್ಯ ಹಾಗು ಯೋಗಕ್ಷೇಮ ಬಗ್ಗೆ ವಿಚಾರಿಸುವ ನೆಪದಲ್ಲಿ ಆಗಮಿಸಿ, ಈ ಭೇಟಿಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಹಾಗೂ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆಂದು ಹೇಳಿದ್ದರು.
ನನ್ನ ನಿಮ್ಮ ನಡುವಿನ 5 ನಿಮಿಷಗಳ ಭೇಟಿಯ ವೇಳೆ ಎಲ್ಲಿಯೂ ರಫೇಲ್ ಬಗ್ಗೆ ಪ್ರಸ್ತಾಪವಾಗಲಿಲ್ಲ. ಸೌಜನ್ಯಕ್ಕೆಂದು ಭೇಟಿ ಮಾಡಿ ನಂತರ ಕೆಳಮಟ್ಟಕ್ಕೆ ಇಳಿದು ಸುಳ್ಳು ರಾಜಕೀಯ ಹೇಳಿಕೆಯನ್ನು ನೀಡಿದ್ದೀರಿ. ಇದರಿಂದಾಗಿ ನಿಮ್ಮ ಭೇಟಿಯ ಪ್ರಮಾಣಿಕತೆ ಹಾಗೂ ಉದ್ದೇಶದ ಬಗ್ಗೆ ನನಗೆ ಶಂಕೆ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನಲೆಯಲ್ಲಿ ಪರಿಕ್ಕರ್ ಅವರಿಗೆ ಪತ್ರ ಬರೆದಿರುವ ರಾಹುಲ್ ಆವರು, ನಮ್ಮಿಬ್ಬರ ನಡುವಿನ ಸಂಭಾಷಣೆಯನ್ನು ನಾನು ಬಹಿರಂಗಪಡಿಸಿಲ್ಲ. ಸಾರ್ವಜನಿಕ ವಲಯದಲ್ಲಿರುವ ಮಾಹಿತಿಯನ್ನು ಹಂಚಿಕೊಂಡಿದ್ದೇನೆ. ನಮ್ಮ ಭೇಟಿಯ ಬಳಿಕ ನೀವೆಷ್ಟು ಒತ್ತಡ ಅನುಭವಿಸುತ್ತಿದ್ದೀರಿ ಎಂಬುದು ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಆರೈಸಿದ್ದಾರೆ.

About the author

ಕನ್ನಡ ಟುಡೆ

Leave a Comment