ರಾಜ್ಯ ಸುದ್ದಿ

ರಸ್ತೆಗಳ ಗುಂಡಿಗಳನ್ನು ಮುಚ್ಚದೆ ಏನು ಮಾಡುತ್ತಿದ್ದೀರಿ: ಬಿಬಿಎಂಪಿಗೆ ಹೈಕೋರ್ಟ್ ತೀವ್ರ ತರಾಟೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಸಾಕಷ್ಟು ಕಾಲಾವಕಾಶ ನೀಡಲಾಗಿದ್ದರೂ ಕೂಡ ಇನ್ನೂ ನಗರದ ರಸ್ತೆಗಳು ಹೊಂಡ-ಗುಂಡಿಗಳಿಂದ ಮುಕ್ತವಾಗಿಲ್ಲ ಎಂದು ಹೈಕೋರ್ಟ್ ಬಿಬಿಎಂಪಿಗೆ ಛೀಮಾರಿ ಹಾಕಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಬಿಬಿಎಂಪಿಗೆ ನೀಡಿದ್ದ ಒಂದು ತಿಂಗಳು 4 ದಿನ ಕಾಲಾವಕಾಶದಲ್ಲಿ ಹೊಂಡ-ಗುಂಡಿಗಳನ್ನು ಮುಚ್ಚಬಹುದಾಗಿತ್ತು ದಸರಾ ರಜೆ ಸಂದರ್ಭದಲ್ಲಿ ನಗರದಲ್ಲಿ ವಾಹನ ಹಾಗೂ ಸಂಚಾರ ದಟ್ಟಣೆ ವಿರಳವಾಗಿತ್ತು.

ಆ ಸಮಯದಲ್ಲಿ ಏಕೆ ಗುಂಡಿ ಮುಚ್ಚಲಿಲ್ಲ ಎಂದು ಕೇಳಿದೆ. ಇಲ್ಲದಿದ್ದರೂ ನಗರ ಪೊಲೀಸ್ ರನ್ನು ಸಂಪರ್ಕಿಸಿ ಬಿಬಿಎಂಪಿ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಿ ಗುಂಡಿಗಳಿರುವಲ್ಲಿ ಮುಚ್ಚುವ ಕೆಲಸ ಮಾಡಬೇಕಾಗಿತ್ತು, ಆದರೆ ನಗರ ಪಾಲಿಕೆ ಈ ಕೆಲಸ ಮಾಡಿಲ್ಲ ಎಂದು ನ್ಯಾಯಾಲಯ ಹೇಳಿದೆ.ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಕೆಲಸ ಮಾಡದಿದ್ದರೆ ಬೆಂಗಳೂರೇನು ಮುಚ್ಚಿ ಹೋಗುವುದಿಲ್ಲ, ಬದಲಿಗೆ ಬಿಬಿಎಂಪಿಯೇ ಮುಚ್ಚುತ್ತದೆ. ಹೊಂಡ ಗುಂಡಿ ವಿಚಾರವೇ ಈ ನ್ಯಾಯಾಲಯಕ್ಕೆ ಗುಂಡಿಯಾಗಿದೆ. ಬಿಬಿಎಂಪಿ ಕೆಲಸ ಮಾಡದಿದ್ದರೆ ಅದು ಅಸಮರ್ಥ ಎಂದು ಸಾಬೀತುಪಡಿಸಿದಂತಾಗುತ್ತದೆ. ಬೆಂಗಳೂರು ನಗರ ಸಂಪೂರ್ಣ ಗುಂಡಿ ಮುಕ್ತ ರಸ್ತೆಯಾಗಬೇಕಿತ್ತು. ನೀವು ಕೆಲಸ ಮಾಡದಿದ್ದರೆ ನಿಮ್ಮ ಕೆಲಸ ಮಾಡುವವರು ಬೇರೆಯವರು ಬರುತ್ತಾರೆ. ಆದರೆ ಇದಕ್ಕೆ ನೀವಂತೂ ಭಾರೀ ಬೆಲೆ ತೆತ್ತಬೇಕಾಗುತ್ತದೆ. ಏನಾದರೂ ಸಬೂಬು ಹೇಳಿ ನ್ಯಾಯಾಲಯಕ್ಕೆ ಮೋಸ ಮಾಡಬಹುದು ಎಂದು ನೀವು ಭಾವಿಸಬಹುದು. ನಮಗೆ ಗೊತ್ತಾಗುವುದಿಲ್ಲ ಎಂದು ತಿಳಿದುಕೊಳ್ಳಬಹುದು.

ಅದು ಅವರ ತಪ್ಪು ಗ್ರಹಿಕೆಯಷ್ಟೆ ಎಂದು ನ್ಯಾಯಾಧೀಶರು ನಿನ್ನೆ ಕೋರ್ಟ್ ನಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ.ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಿರುವ ಬಗ್ಗೆ ವರದಿ ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಈ ಆರೋಪ ಮಾಡಿದೆ. ವಿಜಯನ್ ಮೆನನ್ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಕೆ ಸಂದರ್ಭದಲ್ಲಿ ನ್ಯಾಯಾಲಯ ಹೀಗೆ ಹೇಳಿದೆ.ಬೆಂಗಳೂರು ಸುತ್ತಮುತ್ತ ಗುಂಡಿಗಳು ಎಲ್ಲೆಲ್ಲ ಇದೆ ಎಂದು ಗುರುತಿಸಿ ಎಂದು ನ್ಯಾಯಾಲಯದ ಕಮಿಷನರ್ ಗೆ ಸೂಚಿಸಿದ ನ್ಯಾಯಾಧೀಶರು ನಾಳೆಯೊಳಗೆ ವರದಿ ಸಲ್ಲಿಸುವಂತೆ ಹೇಳಿದ್ದಾರೆ. ಪ್ರತಿ ಶನಿವಾರ ನಗರದ ಗುಂಡಿಗಳನ್ನು ಪರಿಶೀಲಿಸುವುದಾಗಿ ಕೂಡ ನ್ಯಾಯಾಧೀಶರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment