ರಾಜ್ಯ ಸುದ್ದಿ

ರಾಕ್ಷಸ ರಾಜ್ಯದಲ್ಲಿ ನಾನು ಪುಣ್ಯಕೋಟಿ: 12 ವರ್ಷಗಳ ಬಳಿಕ ದ್ವೇಷ ತೀರಿಸಿಕೊಂಡ ಎಚ್‌ಡಿಕೆ ಎಂದ ರೆಡ್ಡಿ

ಬೆಂಗಳೂರು: ಆ್ಯಂಬಿಡೆಂಟ್‌ ವಂಚನೆ ಪ್ರಕರಣಲ್ಲಿ ಜಾಮೀನಿನ ಮೇಲೆ ಹೊರಗೆ ಬರುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳ ಮುಂದೆ ಮುಖ್ಯಮಂತ್ರಿ ಕುಮಾರಸ್ವಾಮಿ, ಗೃಹಮಂತ್ರಿ ಪರಮೇಶ್ವರ್‌ ಮತ್ತು ಸಿಸಿಬಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾದ ಮಾಜಿ ಸಚಿವ ಜನಾರ್ದನರೆಡ್ಡಿ , ‘ಕುಮಾರಸ್ವಾಮಿ ಅವರದ್ದು ಹಾವಿನ ದ್ವೇಷ. 12 ವರ್ಷಗಳ ಬಳಿಕ ನನ್ನ ಮೇಲೆ ದ್ವೇಷ ತೀರಿಸಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.

”2006ರಲ್ಲಿ ಕುಮಾರಸ್ವಾಮಿ ಅವರು ನನ್ನಿಂದ 150 ಕೋಟಿ ರೂ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದೆ. ಆಗಲೇ 1500 ಪೊಲೀಸರನ್ನು ಬಿಟ್ಟು ನನ್ನನ್ನು ಬಂಧಿಸಲು ನೋಡಿದ್ದರು. ಅದು ಸಾಧ್ಯವಾಗಿರಲಿಲ್ಲ. ಆದರೆ ಸರಿಯಾಗಿ 12 ವರ್ಷಗಳ ನಂತರ (2006 ರಿಂದ 2018) ನನ್ನ ಮೇಲೆ ಹಾವಿನಂತೆ ದ್ವೇಷ ತೀರಿಸಿಕೊಂಡಿದ್ದಾರೆ. ನಾನು ಪತ್ನಿ ಮಕ್ಕಳ ಜತೆ ನೆಮ್ಮದಿಯಾಗಿ ಬೆಂಗಳೂರಿನಲ್ಲಿ ಇದ್ದೇನೆ. ಆದರೆ, ಬೆಂಗಳೂರು ಬಿಡಿಸಬೇಕೆಂಬ ಉದ್ದೇಶದಿಂದ ಭಯದ ವಾತಾವರಣ ಸೃಷ್ಟಿಸಿರುವ ಮುಖ್ಯಮಂತ್ರಿ, ಅವರ ನಿಷ್ಠಾವಂತ ಪೊಲೀಸ್‌ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ನನ್ನನ್ನು ಬೆಂಗಳೂರು ಬಿಡಿಸುವ ಅವರ ಆಸೆ ಯಾವತ್ತಿಗೂ ಈಡೇರುವುದಿಲ್ಲ. ನನ್ನ ಹೋರಾಟ ಮುಂದುವರಿಸುತ್ತೇನೆ” ಎಂದು ಸವಾಲು ಹಾಕಿದರು.

ಸಿಎಂಗೆ ರೆಡ್ಡಿ ಸವಾಲು : ದೇವರು ನಿಮ್ಮನ್ನು ಶಾಶ್ವತ ನಗೆಪಾಟಲು ಮಾಡುತ್ತಾನೆ. ಮಾನವೀಯತೆ ಇಲ್ಲದ ಕ್ರೂರ ಆಡಳಿತ ನಡೆಸುತ್ತಿದ್ದಾರೆ. ನನ್ನಂಥಾ ಧೈರ್ಯಶಾಲಿ ಹೋರಾಟಗಾರನನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ರೀ ಕುಮಾರಸ್ವಾಮಿ ಅವರೇ, ನಿಮಗೆ ಜನ ಅಧಿಕಾರ ಕೊಟ್ಟಿಲ್ಲ. ಲಾಟ್ರಿ ಹೊಡೆದಂತೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದೀರಿ ನೀವು ಇನ್ನು ಆರು ತಿಂಗಳು ಮುಖ್ಯಮಂತ್ರಿ ಆಗಿರ್ತೀರೋ, ಐದು ವರ್ಷ ಪೂರೈಸ್ತೀರೋ ನೋಡೋಣ.

ಸರಕಾರಕ್ಕೆ ರೆಡ್ಡಿ ಮನವಿ: ನನಗೆ ಈ ರಾಕ್ಷಸ ಆಡಳಿತದಲ್ಲಿ ಜೀವ ಭಯ ಇದೆ. ನನಗೆ ಪೊಲೀಸ್‌ ಭದ್ರತೆ ಬೇಕೇ ಬೇಕು. ಆಂಧ್ರದಲ್ಲಿ ವಿಮಾನದಿಂದ ಇಳಿದ ಕೂಡಲೇ ಪೊಲೀಸ್‌ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡು ಹೊಗುತ್ತಾರೆ, ಬರುತ್ತಾರೆ. ಅದೇ ರೀತಿಯ ಭದ್ರತೆ ಕರ್ನಾಟಕದಲ್ಲೂ ಬೇಕು ರಾಕ್ಷಸ ರಾಜ್ಯದಲ್ಲಿ ನಾನು ಪುಣ್ಯಕೋಟಿ, ನಾನು ಯಾವುದೇ ತಪ್ಪುಮಾಡಿಲ್ಲ.

ಅನಂತ್‌ಕುಮಾರ್‌ಗೆ ಸಂತಾಪ; ಜೈಲಿನಿಂದ ಹೊರಬಂದ ಜನಾರ್ದನ ರೆಡ್ಡಿ ಅವರಿಗೆ ಅಂತಿಮ ನಮನ ಸಲ್ಲಿಸಲು ಆಗದಿದ್ದಕ್ಕೆ ನೊಂದುಕೊಂಡಿದ್ದಾರೆ.ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು,”ಅವರು ನನ್ನ ಹಿರಿಯ ಅಣ್ಣ ಆಗಿದ್ದರು.ಅನಂತ್‌ಕುಮಾರ್‌ ಅವರ ಸಲಹೆ ಮೇರೆಗೇ ಒಎಂಸಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದೆ. ನಾನು ಜೈಲಿನಿಂದ ಬಂದ ಮೇಲೆ ರಾಷ್ಟ್ರಮಟ್ಟದ ನಾಯಕನನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಯಾವತ್ತೂ ಆಕಾಶದಲ್ಲಿ ಹಾರಾಡಬೇಡ. ನೆಲದಲ್ಲೇ ಓಡಾಡು ಎನ್ನುವ ಸಲಹೆ ನೀಡಿದ್ದರು. ಕೊನೆಗಾಲದಲ್ಲಿ ಅವರನ್ನು ನೋಡಲು ಆಗಲಿಲ್ಲ ,”ಎಂದು ವಿಷಾದ ವ್ಯಕ್ತಪಡಿಸಿದರು.

ಅಧಿಕಾರಿಗಳ ಬಗ್ಗೆ ವ್ಯಂಗ್ಯ: ಸಿಸಿಬಿ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ಕುಮಾರ್‌ ಅಬ್ಬಬ್ಬಾ ಪ್ರಾಮಾಣಿಕತೆಯಲ್ಲಿ ನಂಬರ್‌ ಒನ್‌.ಡಿಸಿಪಿ ಗಿರೀಶ್‌ ಇನ್ನೂ ಪ್ರಾಮಾಣಿಕರು ಎಂದು ರೆಡ್ಡಿ ವ್ಯಂಗ್ಯವಾಡಿದ್ದಾರೆ.
”ಈ ಇಬ್ಬರೂ ಪ್ರಾಮಾಣಿಕ ಅಧಿಕಾರಿಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾವಣೆ ಮಾಡಿದರೆ ದೇಶವೇ ನೆಮ್ಮದಿಯಿಂದ ಇರುತ್ತದೆ ಎಂದು ಲೇವಡಿ ಮಾಡಿದರು.

ಆ್ಯಂಬಿಡೆಂಟ್‌ ಮಾಲೀಕ ಫರೀದ್‌ನನ್ನು ಬಂಧಿಸದಂತೆ ಆಗಿನ ಗೃಹ ಮಂತ್ರಿ ರಾಮಲಿಂಗಾರೆಡ್ಡಿ ಆಗಿನ ಕಮಿಷನರ್‌ಗೆ ಹೇಳಿದ್ದರಂತೆ ಬಂಧನದಿಂದ ಲಾಭವಿಲ್ಲ, ಜನರ ದುಡ್ಡನ್ನು ವಾಪಸ್‌ ಕೊಡಿಸಿ ಎಂದು ಫರೀದ್‌ನನ್ನು ಬಂಧಿಸದಂತೆ ಮಾಡಿದ್ದರು. ಫರೀದ್‌ ರಾಮಲಿಂಗಾರೆಡ್ಡಿ ಅವರನ್ನೂ ಭೇಟಿ ಆಗಿದ್ದ ಎಂದು ಬ್ರಿಜೇಶ್‌ ನನ್ನ ಬಳಿ ಹೇಳಿಕೊಂಡಿದ್ದರು.
– ಜನಾರ್ದನ ರೆಡ್ಡಿ 

ಆ್ಯಂಬಿಡೆಂಟ್‌ ಜತೆಗಿನ ನಂಟು ನನ್ನ ಆಪ್ತ ಸಹಾಯಕ ಅಲಿಖಾನ್‌ ಮತ್ತು ಸಂಬಂಧಿಗಳು ಆ್ಯಂಬಿಡೆಂಟ್‌ ಕಂಪನಿಯಲ್ಲಿ 60-70 ಲಕ್ಷ ಹೂಡಿಕೆ ಮಾಡಿದ್ದರು. ಆ್ಯಂಬಿಡೆಂಟ್‌ನಲ್ಲಿ ಹಣ ಹೂಡಿಕೆ ಮಾಡಿದ್ದವರೆಲ್ಲಾ ಮೇಲಿಂದ ಮೇಲೆ ಫರೀದ್‌ ಮೇಲೆ ಬೀಳುತ್ತಿದ್ದರು. ನನ್ನ ಬಳಿ ಬಂದಿದ್ದ ಫರೀದ್‌ ಸಾರ್ವಜನಿಕರ ಹಣ ವಾಪಸ್‌ ಕೊಡುತ್ತೇನೆ. ನನಗೆ ಸಮಯ ಕೊಡಿಸಿ ಎಂದು ನನ್ನ ಬಳಿ ಬಂದಿದ್ದರು. ನನ್ನದು ಯಾವತ್ತೂ ಕೊಡುವ ಕೈ. ಬೇಡುವ ಕೈ ಅಲ್ಲ. ನಾನು 10-20 ಕೋಟಿಗೆಲ್ಲಾ ಕೈ ಚಾಚುವವನಲ್ಲ ಎಂದು ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. 

ವೆಸ್ಟೆಂಡ್‌ ಹೋಟೆಲ್‌ ಫೋಟೋ ಬಗ್ಗೆ : ನಾನು ವಿಮಾನದಲ್ಲಿ ಪ್ರಯಾಣ ಮಾಡಿದರೆ ಪ್ರಯಾಣಿಕರು ನನ್ನ ಜತೆ ಸೆಲ್ಫೀ ತೆಗೆಸಿಕೊಳ್ಳಲು ಮುಗಿ ಬೀಳ್ತಾರೆ. ನಾನು ಅವರ ಜತೆ ಸೆಲ್ಫೀ ತೆಗೆಸಿಕೊಳ್ಳಲಿಲ್ಲ ಎಂದರೆ ‘ಜೈಲಿಗೆ ಹೋಗಿ ಬಂದರೂ ಬುದ್ದಿ ಬರಲಿಲ್ಲ’ ಎಂದು ಬಯ್ಕೋತಾರೆ. ಹೀಗಾಗಿ ಯಾರೇ ನನ್ನ ಬಳಿ ಬಂದರೂ ಫೋಟೋ ತೆಗೆಸಿಕೊಳ್ಳುತ್ತೇವೆ ಎಂದರೆ ಬೇಡ ಅನ್ನಲ್ಲ. ಅದೇ ರೀತಿ ಫರೀದ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಫೋಟೋ ತೆಗೆದುಕೊಂಡಿದ್ದಾರೆ. 

ಕ್ರೂರ ವ್ಯಾಘ್ರದ ಉಪಮೆ; ಮಾತಿನ ರಭಸದಲ್ಲಿ ಧರಣಿ ಮಂಡಳ ಮಧ್ಯದೊಳಗೆ ಪದ್ಯದ ಕೊನೆ ಪ್ಯಾರಾವನ್ನು ಹಾಡಿದ ರೆಡ್ಡಿ, ಖಂಡವಿದೆಕೋ-ಮಾಂಸವಿದೆಕೋ, ಗುಂಡಿಗೆಯ ಬಿಸಿ ರಕ್ತವಿದೆಕೋ ಕ್ರೂರ ವ್ಯಾಘ್ರನೆ ನೀನಿದೆಲ್ಲವ ಉಂಡು ಸಂತಸದಿಂದಿರು..’ ಎಂದು ಮುಖ್ಯಮಂತ್ರಿಗೆ ಕುಮಾರಸ್ವಾಮಿಗೆ ಹೇಳಿ ರೆಡ್ಡಿ ಮಾತು ಮುಗಿಸಿದರು.

About the author

ಕನ್ನಡ ಟುಡೆ

Leave a Comment