ಪರಿಸರ

ರಾಜಧಾನಿಯಲ್ಲಿ ಮತ್ತೆ ಮಳೆ ಆರಂಭ : ಮುಂದಿದೆ ಭಾರಿ ಅಪಾಯ

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಮರದ ಕೊಂಬೆಗಳು ಉರುಳಿ ಬಿದ್ದು ಭಾರಿ ಸಮಸ್ಯೆ ಸೃಷ್ಟಿಸುತ್ತಿವೆ. ರಸ್ತೆ ಹೊಂಡಗಳು ವಾಹನಗಳು ಚಲಿಸಲಾರದಂತೆ ಮಾಡಿವೆ. ಇಷ್ಟೆಲ್ಲ ಆದರೂ ಅನಾಹುತ ತಡೆಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ನಗರದ ಜನ ಮುಂದೆ ಇನ್ನಷ್ಟು ಅನಾಹುತಗಳನ್ನು ಕಾಣುವುದರಲ್ಲಿ ಅನುಮಾನ ಇಲ್ಲ. ಮುಂಗಾರು ಈ ಬಾರಿ ಕಡಿಮೆಯಿತ್ತು. ಹೀಗಾಗಿ ಕಳೆದ ವರ್ಷದಂತೆ ಹೆಚ್ಚಿನ ಹಾನಿಯಾಗಿಲ್ಲ. ಆದರೆ ಸೆಪ್ಟೆಂಬರ್‌ನಲ್ಲಿ ಮುಂಗಾರು ಚುರುಕಾಗಿರುವುದರಿಂದ ಮತ್ತೆ ಮಳೆ ಆರಂಭವಾಗಿದೆ.

ಈಗ ಪ್ರತಿ ದಿನ ಸಂಜೆ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಒಂದೊಂದೇ ಸಮಸ್ಯೆಗಳು ಎದುರಾಗುತ್ತಿವೆ. ನಿತ್ಯ ಸುರಿಯುತ್ತಿರುವ ಮಳೆಗೆ ರಸ್ತೆಗಳಲ್ಲಿ ಮೂರ್ನಾಲ್ಕು ಅಡಿಗಳವರೆಗೆ ನೀರು ನಿಲ್ಲುವುದು, ಗುಂಡಿಗಳಲ್ಲಿ ನೀರು ನಿಂತು ಅಪಘಾತವಾಗುವುದು, ಕೊಂಬೆಗಳು ಉರುಳಿ ಬೀಳುವುದು, ಚರಂಡಿಯಿಂದ ನೀರು ಹೊರಗೆ ಬಂದು ಹರಿಯುವುದೂ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅಕ್ಟೋಬರ್‌ ತಿಂಗಳಲ್ಲೂ ಮಳೆ ಬರುವ ಸಾಧ್ಯತೆ ಇರುವುದರಿಂದ ಇನ್ನೂ ಸಿದ್ಧತೆ ನಡೆಯದಿದ್ದರೆ ಅನಾಹುತಗಳು ಸಂಭವಿಸುವುದು ಖಚಿತ. ನಗರದಲ್ಲಿ ಗುಂಡಿಗಳ ಸಮಸ್ಯೆ ವರ್ಷಪೂರ್ತಿ ಇರುವುದು ಸಹಜ. ಬೇಸಿಗೆ ಅಥವಾ ಚಳಿಗಾಲಕ್ಕಿಂತ ಮಳೆಗಾಲದಲ್ಲೇ ಈ ಗುಂಡಿಗಳು ಬೀಳುತ್ತವೆ. ಗೂಡ್‌ಶೆಡ್‌ ರಸ್ತೆ, ಕಾಟನ್‌ಪೇಟೆ ರಸ್ತೆ, ರಾಯನ್‌ ಸರ್ಕಲ್‌, ಓಕಳಿಪುರದಿಂದ ಮೆಜೆಸ್ಟಿಕ್‌ಗೆ ಸಾಗುವ ರಸ್ತೆ ಸೇರಿದಂತೆ ಅನೇಕ ರಸ್ತೆಗಳಲ್ಲಿ ಗುಂಡಿಗಳು ಮಳೆನೀರಿನಿಂದ ಮುಚ್ಚಿಹೋಗುತ್ತವೆ.

ಬಿಬಿಎಂಪಿಯ 8 ವಲಯಗಳಲ್ಲಿ ಕೆಲಸ ಮಾಡಲು 21 ಅರಣ್ಯ ತಂಡಗಳನ್ನು ರಚಿಸಲಾಗಿದೆ. ಮರ, ಕೊಂಬೆ ಬಿದ್ದ ದೂರುಗಳು ಬಂದಾಗ ಈ ತಂಡಗಳು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸುತ್ತವೆ. ಜೋರು ಮಳೆ ಬಂದಾಗ ಬಹಳ ಕೊಂಬೆಗಳು ಬಿದ್ದರೆ ಇಷ್ಟು ತಂಡಗಳನ್ನು ಇಟ್ಟುಕೊಂಡು ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ವಿಭಾಗವು ಹಿಂದೆಯೇ ಬಿಬಿಎಂಪಿ ಮೇಯರ್‌ಗೆ ತಿಳಿಸಿತ್ತು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 28 ತಂಡಗಳನ್ನು ನಿಯೋಜಿಸಬೇಕು ಎಂದೂ ಮನವಿ ಮಾಡಲಾಗಿತ್ತು. ಆದರೆ ಇದಕ್ಕೆ ಬಿಬಿಎಂಪಿಯಿಂದ ಸ್ಪಂದನೆ ಸಿಕ್ಕಿಲ್ಲ.

About the author

ಕನ್ನಡ ಟುಡೆ

Leave a Comment