ರಾಜಕೀಯ

ರಾಜಸ್ಥಾನದಲ್ಲೂ 80 ರಿಂದ 100 ಹಾಲಿ ಬಿಜೆಪಿ ಶಾಸಕರಿಗೆ ಕೊಕ್

ಹೊಸದಿಲ್ಲಿ: ಮಧ್ಯಪ್ರದೇಶದಂತೆಯೇ ರಾಜಸ್ಥಾನದಲ್ಲಿಯೂ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿಯು ವಿಧಾನಸಭೆ ಚುನಾವಣೆ ಗೆಲ್ಲಲು ಹೊಸ ತಂತ್ರ ಹೆಣೆದಿದೆ. ಸದ್ಯ ಅಧಿಕಾರದಲ್ಲಿರುವ ಅರ್ಧಕ್ಕೂ ಅಧಿಕ ಕಮಲ ಶಾಸಕರಿಗೆ ಮುಮದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡದಿರಲು ಬಿಜೆಪಿ  ಚಿಂತಿಸುತ್ತಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಭಾರಿ ಹಿನ್ನಡೆಯಾಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಕ್ಷವು ಈ ಬಾರಿ ಹಾಲಿ 160 ಶಾಸಕರ ಪೈಕಿ 80 ರಿಂದ 100 ಶಾಸಕರನ್ನು ಹೊರಗಿಟ್ಟು ಹೊಸ ಮುಖಗಳಿಗೆ ಟಿಕೆಟ್‌ ನೀಡಲು ಚಿಂತಿಸುತ್ತಿದೆ ಎಂದು ಮೂಲಗಳು ಹೇಳಿವೆ. ಅಲ್ಲದೆ, ಪಕ್ಷದ ಈ ನಡೆ ಇತರೆ ರಾಜ್ಯಗಳ ಬಿಜೆಪಿ ಶಾಸಕರಿಗೂ ಹಾಗೂ ಲೋಕಸಭೆಯ ಸಂಸದರಿಗೂ ಎಚ್ಚರಿಕೆಯ ಸಂದೇಶ ಎನ್ನಲಾಗಿದೆ. ಪ್ರಧಾನಿ ಮೋದಿಯ ನಮೋ ಆ್ಯಪ್‌ ಮೂಲಕ ಹಾಗೂ ಇತರೆ ಸಾಂಪ್ರದಾಯಿಕ ಮಾಧ್ಯಮಗಳ ಮೂಲಕ ಎಂಎಲ್‌ಎ, ಎಂಪಿಗಳ ಕಾರ್ಯ ನಿರ್ವಹಣೆಯ ವರದಿಗಳನ್ನು ಬಿಜೆಪಿ ಪಡೆದುಕೊಳ್ಳುತ್ತಿದ್ದು, ಆ ವರದಿಗಳ ಆಧಾರದ ಮೇಲೆ ಕಳಪೆ ಪ್ರದರ್ಶನ ತೋರುತ್ತಿರುವ ಶಾಸಕರನ್ನು ಕೈಬಿಡಲಾಗುವ ಸಾಧ್ಯತೆಗಳು ದಟ್ಟವಾಗಿದೆ.

” ನಮೋ ಆ್ಯಪ್‌ನಲ್ಲಿ ತಮ್ಮ ಕ್ಷೇತ್ರದ ಜನಪ್ರತಿನಿಧಿಗಳ ಕಾರ್ಯ ನಿರ್ವಹಣೆ ಬಗ್ಗೆ ಹೆಚ್ಚು ಜನತೆ ನೇರವಾಗಿ ಪ್ರಧಾನಿಗೇ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗಾಗಿ, ಜವಾಬ್ದಾರಿಯಿಂದ ನುಣುಚಿಕೊಂಡಿರುವ ಹಾಗೂ ಜನತೆಯ ಆಶೋತ್ತರಗಳನ್ನು ಸರಿಯಾಗಿ ಈಡೇರಿಸದ ಶಾಸಕರ ವಿರುದ್ಧ ಮತದಾರರು ಸೇಡು ತೀರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಹಿನ್ನೆಲೆ ಹಲವು ಹಾಲಿ ಕ್ಷೇತ್ರಗಳಿಗೆ ಟಿಕೆಟ್ ನೀಡದೆ ಅವರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲು ಪಕ್ಷ ನಿರ್ಧರಿಸಿದೆ” ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಹಾಲಿ ಜನಪ್ರತಿನಿಧಿಗಳ ಮೇಲಿನ ಆಕ್ರೋಶ ತಣಿಸಲು ಹಾಗೂ ಉತ್ತಮ ಕಾರ್ಯ ನಿರ್ವಹಣೆಯ ಭರವಸೆ ನೀಡಲು ಹೊಸಬರಿಗೆ ಹಾಗೂ ಯುವ ನಾಯಕ – ನಾಯಕಿಯರಿಗೆ ಟಿಕೆಟ್ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಉತ್ತಮ ಕಾರ್ಯನಿರ್ವಹಣೆ ಬಿಜೆಪಿಗೆ ಪ್ರಮುಖ ವಿಚಾರವಾಗಿದ್ದರೂ ಅಭ್ಯರ್ಥಿಗಳನ್ನು ಬದಲಿಸಲು ಜಾತಿ ಸಮೀಕರಣವನ್ನು ಬದಲಾಯಿಸುವುದು ಸಹ ಪ್ರಮುಖ ವಿಚಾರವಾಗಿದೆ.

ಬಿಜೆಪಿಯ ಸಾಂಪ್ರದಾಯಿಕ ಮತಗಳಾದ ರಜಪೂತ ಸಮುದಾಯವು ಈ ಬಾರಿ ಕಾಂಗ್ರೆಸ್‌ನತ್ತ ವಾಲುತ್ತಿದೆ ಎನ್ನಲಾಗಿದೆ. ಆದರೆ, ಈಶಾನ್ಯ ರಾಜಸ್ಥಾನದ ಪ್ರಮುಖ ಸಮುದಾಯಗಳಲ್ಲೊಂದಾದ ಮೀನಾಸ್‌ ಸಮುದಾಯದ ನಾಯಕ ಕಿರೋರಿ ಲಾಲ್‌, ಬಿಜೆಪಿಗೆ ಸೇರ್ಪಡೆಯಾದ ಬಳಿಕ ಅವರ ಸಮುದಾಯದವರು ಬಿಜೆಪಿ ಕಡೆಗೆ ವಾಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಕಮಲ ಹಿಡಿದಿದ್ದ ಕಿರೋರಿ ಲಾಲ್‌ನನ್ನು ರಾಜ್ಯಸಭಾ ಸಂಸದನನ್ನಾಗಿ ಮಾಡಲಾಗಿದೆ.

About the author

ಕನ್ನಡ ಟುಡೆ

Leave a Comment