ರಾಜಕೀಯ

ರಾಜಸ್ಥಾನ ಮತ್ತು ತೆಲಂಗಾಣ ವಿಧಾಸಭೆಗೆ ಬಿರುಸಿನ ಶಾಂತಿಯುತ ಮತದಾನ

ಜೈಪುರ /ಹೈದರಾಬಾದ್‌: ರಾಜಸ್ಥಾನ  ಮತ್ತು ತೆಲಂಗಾಣ ವಿಧಾನಸಭೆಗೆ ಶುಕ್ರವಾರ ಮತದಾನ ನಡೆಯುತ್ತಿದ್ದು ಬೆಳಗ್ಗೆ 9.30 ರ ವರೆಗೆ ಶಾಂತಿಯುತ ಮತದಾನ ನಡೆಯುತ್ತಿರುವ  ಬಗ್ಗೆ ವರದಿಯಾಗಿದೆ. ಉಭಯ ರಾಜ್ಯಗಳಲ್ಲೂ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.

ತೆಲಂಗಾಣದಲ್ಲಿ ಬೆಳಗ್ಗೆ 9.30 ರ ವೇಳೆಗೆ 10.15 ಶೇಕಡಾ ಮತದಾನವಾಗಿದ್ದರೆ, ರಾಜಸ್ಥಾನದಲ್ಲಿ 9 ಗಂಟೆಯ ವೇಳೆ 6 ಶೇಕಡಾ ಮತದಾನವಾಗಿದೆ. ಮತಗಟ್ಟೆಯತ್ತ ಮತದಾರರು ಉತ್ಸಾಹದಿಂದ ಆಗಮಿಸುತ್ತಿದ್ದು, ಯುವ ಮತದಾರರು ಮತದಾನ ಮಾಡಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.

ರಾಜಸ್ಥಾನದ ಅಂತರಾಷ್ಟ್ರೀಯ ಗಡಿ ರೇಖೆಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು, ಹಲವೆಡೆ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಿ ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ.

ಝಾಲರ್‌ಪಟನ್‌ನಲ್ಲಿ ಪಿಂಕ್‌ ಬೂತ್‌ನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ತಮ್ಮ ಹಕ್ಕು ಚಲಾಯಿಸಿದರು. ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಈ ವೇಳೆ ವ್ಯಕ್ತ ಪಡಿಸಿದರು. ರಾಜಸ್ಥಾನ ಮತ್ತು ತೆಲಂಗಾಣದ ಹಲವೆಡೆ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡು ಬಂದು ಮತದಾನಕ್ಕೆ ವಿಳಂಬವಾಗಿರುವ ಬಗ್ಗೆಯೂ ವರದಿಗಳು ಬಂದಿವೆ.

ಗಣ್ಯರಿಂದ ಹಕ್ಕು ಚಲಾವಣೆ 
ರಾಜಸ್ಥಾನದಲ್ಲಿ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಠೊಡ್‌ ಅವರು ಜೈಪುರದ ವೈಶಾಲಿ ನಗರ್‌ನಲ್ಲಿ ಹಕ್ಕು ಚಲಾವಣೆ ಮಾಡಿದರು.

ತೆಲಂಗಾಣದಲ್ಲಿ ಪ್ರಖ್ಯಾತ ನಟರಾದ ಅಲ್ಲು ಅರ್ಜುನ್‌ , ಅಕ್ಕಿನೇನಿ ನಾಗಾರ್ಜುನ  ಅವರು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ  ಮತ ಚಲಾಯಿಸಿದರು.

ಎಐಎಂಐಎಂನ ಅಕ್ಬರುದ್ದೀನ್‌ ಓವೈಸಿ ಅವರು ಹೈದರಾಬಾದ್‌ನ ಮೈಲಾರ ದೇವ ಪಳ್ಳಿಯಲ್ಲಿ ಹಕ್ಕು ಚಲಾಯಿಸಿದರು.

 

About the author

ಕನ್ನಡ ಟುಡೆ

Leave a Comment