ರಾಜ್ಯ ಸುದ್ದಿ

 ರಾಜ್ಯಕ್ಕೆ ಮತ್ತಷ್ಟು ಬಂಡವಾಳ ಹೂಡಿಕೆಗೆ ಜಾಗತಿಕ ಸಮಾವೇಶ

ಬೆಂಗಳೂರು: ರಾಜ್ಯಕ್ಕೆ ಮತ್ತಷ್ಟು ಬಂಡವಾಳ ಆಕರ್ಷಿಸುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ 2020ರ ಜನವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಆಸಿಯಾನ್‌ ವಾಣಿಜ್ಯ ಹಾಗೂ ಕೈಗಾರಿಕೋದ್ಯಮಿಗಳ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

”ಎಂಟು ತಿಂಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರಕಾರವು ಅತ್ಯಂತ ಸ್ಥಿರ ಹಾಗೂ ಸುಭದ್ರವಾಗಿದ್ದು, ಉದ್ಯಮಿಗಳು ಹೂಡುವ ಬಂಡವಾಳ ಕೂಡ ಅಷ್ಟೇ ಸುರಕ್ಷಿತವಾಗಿರುತ್ತದೆ. ಆಸಿಯಾನ್‌ ರಾಷ್ಟ್ರಗಳ ಕೈಗಾರಿಕೋದ್ಯಮಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡುವ ಮೂಲಕ ಉಭಯ ರಾಷ್ಟ್ರಗಳ ವ್ಯಾಪಾರ ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು,” ಎಂದು ಮನವಿ ಮಾಡಿದರು.

”ಭಾರತದ ಆರ್ಥಿಕ ಬೆಳವಣಿಗೆಗೆ ಕರ್ನಾಟಕದ ಕೊಡುಗೆಯೂ ಅಪಾರವಾಗಿದೆ. 2018-19ನೇ ಸಾಲಿನಲ್ಲಿ ರಾಜ್ಯದ ಜಿಎಸ್‌ಡಿಪಿ (ಗ್ರಾಸ್‌ ಸ್ಟೇಟ್‌ ಡೊಮೆಸ್ಟಿಕ್‌ ಪ್ರಾಡಕ್ಟ್) 12 ಲಕ್ಷ ಕೋಟಿಗಳಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆ ಶೇ 9.6ರಷ್ಟು ಏರಿಕೆಯಾಗುವ ಸಂಭವವಿದೆ,” ಎಂದರು.

ನಾಲ್ಕನೇ ಬೃಹತ್‌ ತಂತ್ರಜ್ಞಾನ ಕ್ಲಸ್ಟರ್‌ : ”ವಿಶ್ವ ಸಂಸ್ಥೆಯು ಸಿಲಿಕಾನ್‌ ವ್ಯಾಲಿ, ಬಾಸ್ಟನ್‌, ಲಂಡನ್‌ ನಂತರ ಬೆಂಗಳೂರಿಗೆ ವಿಶ್ವದ ನಾಲ್ಕನೇ ಬೃಹತ್‌ ತಂತ್ರಜ್ಞಾನ ಕ್ಲಸ್ಟರ್‌ನ ರಾರ‍ಯಂಕ್‌ ನೀಡಿದೆ. ಅಲ್ಲದೆ, ನವೋದ್ಯಮಗಳ ಸ್ಥಾಪನೆಗೆ ಬೆಂಗಳೂರು ವಿಶ್ವದ ಎರಡನೇ ಅತ್ಯುತ್ತಮ ನಗರವಾಗಿದ್ದು, ಜಗತ್ತಿನ ಮೊದಲ ಐದು ಸಂಶೋಧನೆ ಮತ್ತು ಅಭಿವೃದ್ಧಿಸ್ನೇಹಿ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಆಸಿಯಾನ್‌ ರಾಷ್ಟ್ರಗಳ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿನ ಮೂಲಭೂತ ಸೌಕರ‍್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಬಂಡವಾಳ ಹೂಡಲು ಮುಂದಾಗಬೇಕು,” ಎಂದು ಸಿಎಂ ಮುಕ್ತ ಆಹ್ವಾನ ನೀಡಿದರು.

145ರಿಂದ 77ನೇ ರಾರ‍ಯಂಕ್‌ : ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ ”2014ರಲ್ಲಿ ಜಾಗತಿಕ ಮಟ್ಟದಲ್ಲಿ ವ್ಯಾಪಾರಕ್ಕೆ ಅನುಕೂಲಕರ ವಾತಾವರಣ ಕಲ್ಪಿಸುವಲ್ಲಿ ಭಾರತವು 145ನೇ ರಾರ‍ಯಂಕ್‌ ಪಡೆದಿತ್ತು. ಆದರೆ, ಇತ್ತೀಚೆಗೆ ವಿಶ್ವ ಬ್ಯಾಂಕ್‌ ಬಿಡುಗಡೆ ಮಾಡಿದ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಭಾರತವು 77ನೇ ಸ್ಥಾನಕ್ಕೇರಿದೆ. ಪ್ರಧಾನಿ ನರೇಂದ್ರಮೋದಿ ಅವರು ಕೈಗೊಂಡ ಪಾರದರ್ಶಕ ಕ್ರಮಗಳಿಂದಾಗಿ ಭಾರತವು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ. ದೇಶದ ಒಟ್ಟಾರೆ ಜಿಡಿಪಿ ಶೇ 7.2ರಷ್ಟಿದ್ದರೆ, ಅದೇ ನೆರೆಯ ಚೀನಾದ ಜಿಡಿಪಿ ಬೆಳವಣಿಗೆ ಶೇ 6.2ರಷ್ಟಿದೆ,” ಎಂದರು.

ಸಮಾರಂಭವನ್ನು ಉದ್ಘಾಟಿಸಿದ ರಾಜ್ಯಪಾಲ ವಜುಭಾಯಿ ವಾಲಾ ”ಜಾಗತಿಕ ಮಟ್ಟದಲ್ಲಿ ಭಾರತದ ರಾರ‍ಯಂಕಿಂಗ್‌ನಲ್ಲಿ ಏರಿಕೆ ಕಂಡು ಬಂದಿದ್ದರೆ ಅದರಲ್ಲಿ ಕರ್ನಾಟಕದ ಕೊಡುಗೆಯೂ ಇದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣವಿದ್ದು, ಉದ್ಯಮಿಗಳು ಅಗತ್ಯ ಮೂಲಭೂತ ಸೌಕರ‍್ಯಗಳನ್ನು ನಿರೀಕ್ಷಿಸುವುದರಲ್ಲಿ ತಪ್ಪೇನಿಲ್ಲ. ಹಾಗೆಯೇ, ಬಂಡವಾಳ ಹೂಡಿಕೆದಾರರ ನಿರೀಕ್ಷೆಗಳನ್ನು ಪೂರೈಸುವುದು ಸರಕಾರದ ಕರ್ತವ್ಯವಾಗಿದೆ,” ಎಂದರು.

ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್‌ ಮಾತನಾಡಿ ”ಐಟಿ ಕ್ಷೇತ್ರದಲ್ಲಿ ಬೆಂಗಳೂರು ಕ್ರಾಂತಿಯನ್ನೇ ಮಾಡಿದೆ. ರಾಜಧಾನಿಯಲ್ಲಿ ಇಂದು ಸಾವಿರಾರು ಸಾಫ್ಟ್‌ವೇರ್‌ ಕಂಪನಿಗಳು ನೆಲೆಯೂರಲು ಸರಕಾರ ಕಲ್ಪಿಸಿರುವ ಪೂರಕ ವಾತಾವರಣವೇ ಕಾರಣ,” ಎಂದು ವಿಶ್ಲೇಷಿಸಿದರು.

ಸಚಿವರಾದ ಡಿ. ಕೆ. ಶಿವಕುಮಾರ್‌, ಕೆ. ಜೆ. ಜಾರ್ಜ್‌, ಸಾ.ರಾ. ಮಹೇಶ್‌, ಸಂಸದ ಪಿ.ಸಿ. ಮೋಹನ್‌, ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಆಸಿಯಾನ್‌ ಇಂಡಿಯಾ ಬಿಸಿನೆಸ್‌ ಕೌನ್ಸಿಲ್‌ನ (ಮಲೇಷ್ಯಾ) ಅಧ್ಯಕ್ಷ ಡಾಟೋ ರಮೇಶ್‌ ಕೋಡಮ್ಮಲ್‌ ಮತ್ತಿತರರು ಉಪಸ್ಥಿತರಿದ್ದರು. ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್‌ ಎಸ್‌. ಶೆಟ್ಟಿ ಸ್ವಾಗತಿಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಪ್ರಾಸ್ತಾವಿಕ ಭಾಷಣ ಮಾಡಿದರು.

12 ಬಿಲಿಯನ್‌ ಅಮೆರಿಕನ್‌ ಡಾಲರ್‌ ಹೂಡಿಕೆ ನಿರೀಕ್ಷೆ : ಆಸಿಯಾನ್‌ ವಾಣಿಜ್ಯ ಹಾಗೂ ಕೈಗಾರಿಕೋದ್ಯಮಿಗಳ ಸಮ್ಮೇಳನದಲ್ಲಿ ಮೂಲಸೌಕರ‍್ಯ, ಬಾಹ್ಯಾಕಾಶ, ರಕ್ಷಣೆ, ಕೃತಕ ಬುದ್ದಿಮತ್ತೆ, ಮೆಷಿನ್‌ ಇಂಟೆಲಿಜೆನ್ಸ್‌ ಹಾಗೂ ರೋಬೋಟಿಕ್ಸ್‌ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ 12 ಬಿಲಿಯನ್‌ ಅಮೆರಿಕನ್‌ ಡಾಲರ್‌ ಹೂಡಿಕೆಯ ಒಪ್ಪಂದಗಳಿಗೆ ವೇದಿಕೆಯಾಗಲಿದೆ.  ”ಮಂಗಳವಾರ ಮತ್ತು ಬುಧವಾರ ಬಿ2ಬಿ ಸಭೆಗಳು ನಡೆಯಲಿವೆ. ಸ್ಥಳ ಪರಿಶೀಲನೆ ನಂತರ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. 10 ಆಸಿಯಾನ್‌ ರಾಷ್ಟ್ರಗಳಿಂದ 130 ಪ್ರತಿನಿಧಿಗಳು ಹಾಗೂ ಇತರೆ ರಾಷ್ಟ್ರಗಳಿಂದ 50 ಮಂದಿ ಆಹ್ವಾನಿತರು ಮತ್ತು ದೇಶದ ನಾನಾ ರಾಜ್ಯಗಳ 600 ಮಂದಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ,” ಎಂದು ಎಫ್‌ಕೆಸಿಸಿಐನ ಮಾಜಿ ಅಧ್ಯಕ್ಷ ಸಂಪತ್‌ರಾಮನ್‌ ತಿಳಿಸಿದರು.

About the author

ಕನ್ನಡ ಟುಡೆ

Leave a Comment