ರಾಷ್ಟ್ರ ಸುದ್ದಿ

ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಮೊದಲ ಜಯ

ಹೊಸದಿಲ್ಲಿ: ರಾಜ್ಯದ ಮೇಕೆದಾಟು ಯೋಜನೆಯ ಯೋಜನಾ-ಪೂರ್ವ ಕಾರ್ಯ ಸಾಧ್ಯತಾ ವರದಿಗೆ (ಪ್ರಿ-ಫೀಸಿಬಿಲಿಟಿ ರಿಪೋರ್ಟ್) ಕೇಂದ್ರ ಜಲ ಆಯೋಗ(ಸಿಡಬ್ಲ್ಯುಸಿ) ಸಮ್ಮತಿ ಸೂಚಿಸಿದೆ. ಆದರೆ ಈ ಯೋಜನೆಯಿಂದ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಯಾಗುವ ಪ್ರಮಾಣದಲ್ಲಿ ವ್ಯತ್ಯಯ ಆಗಬಾರದು ಎಂದು ಷರತ್ತು ಹಾಕಿದೆ.

ರಾಜ್ಯದ ಮಹತ್ವದ ಯೋಜನೆಗೆ ತಮಿಳುನಾಡಿಗೆ ಆರಂಭದಿಂದಲೇ ತಗಾದೆ ತೆಗೆಯುತ್ತಿದ್ದು, ಕೇಂದ್ರ ಜಲ ಆಯೋಗ , ರಾಜ್ಯ ಸಲ್ಲಿಸಿದ್ದ ಯೋಜನೆಯ ಪೂರ್ವ ಸಾಧ್ಯತಾ ವರದಿಗೆ ಒಪ್ಪಿಗೆ ಸೂಚಿಸಿದೆ. ಅಲ್ಲದೆ ಯೋಜನೆಯ ಸಂಪೂರ್ಣ ವರದಿಯನ್ನು ಕಳುಹಿಸಬೇಕು. ಹಾಗೂ ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿ ವರ್ಷ ಬಿಡುವ ಕಾವೇರಿ ನೀರು ಯಥಾವತ್‌ ಆಗಿರಬೇಕು. ಈ ಅಂಶವನ್ನು ಗಮದಲ್ಲಿರಿಸಿ ಯೋಜನಾ ವರದಿ ಸಿದ್ಧಪಡಿಸಲು ಅನುಮತಿ ನೀಡಿದೆ ಎಂದೂ ತಿಳಿದು ಬಂದಿದೆ. ಇದರಿಂದ ತಮಿಳುನಾಡಿಗೆ ಬಹುದೊಡ್ಡ ಹಿನ್ನೆಡೆಯುಂಟಾಗಿದಂತಾಗಿದೆ.

ಸುಮಾರು 5 ಸಾವಿರ ಕೋಟಿ ರೂ. 
ಮೊತ್ತದಲ್ಲಿ ರಾಮನಗರದ ಮೇಕೆದಾಟುವಿಲ್ಲಿ ಅಣೆಕಟ್ಟು ನಿರ್ಮಿಸಲು 2013ರಲ್ಲಿ ರಾಜ್ಯ ಸರಕಾರ ಆಯೋಗಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ವಿಚಾರವನ್ನು ತಮಿಳುನಾಡು ತೀವ್ರವಾಗಿ ವಿರೋಧಿಸಿದ್ದು, ಅಂದಿನ ಸಿಎಂ ಜಯಲಲಿತಾ, ಯೋಜನೆಗೆ ಅನುಮತಿ ನೀಡಿದರೆ ತಮಿಳುನಾಡಿಗೆ ಸಮಸ್ಯೆಯಾಗುವುದೆಂದು ಕೇಂದ್ರಕ್ಕೆ ಪತ್ರ ಬರೆದಿದ್ದರು.

66 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸಿ, ರಾಮನಗರ ಹಾಗೂ ಬೆಂಗಳೂರು ಸೇರಿ ಸುತ್ತಮುತ್ತಲ ಪ್ರದೇಶಕ್ಕೆ ನೀರು ಹಾಗೂ ವಿದ್ಯುತ್‌ ಉತ್ಪಾದನೆ ಮಾಡುವುದು ಯೋಜನೆ ಪ್ರಮುಖ ಉದ್ಧೇಶವಾಗಿದೆ. ಬೆಂಗಳೂರು ಭಾಗಕ್ಕೆ ಸುಮಾರು 16 ಟಿಎಂಸಿ ನೀರು ತರಲು ಉದ್ಧೇಶಿಸಲಾಗಿದ್ದು, ಸುಮಾರು 400 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಅವಕಾಶ ಇರಲಿದೆ. ಈ ಮೂಲಕ ರಾಜಧಾನಿಯ ವಿದ್ಯುತ್‌ ಸಮಸ್ಯೆಯನ್ನು ನಿವಾರಿಸಲು ಸರಕಾರ ಯೋಜನೆ ರೂಪಿಸಿದೆ.

ಒಂದು ವೇಳೆ ಯೋಜನೆಗೆ ಅನುಮತಿ ಸಿಕ್ಕಲ್ಲಿ ಯೋಜನೆ ಆರಂಭಿಸುವುದಾಗಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಘೋಷಿಸಿ, ಬಜೆಟ್‌ನಲ್ಲಿ ಘೋಷಿಸಿದ್ದರು. 2018 ಜುಲೈನಲ್ಲಿ ಪ್ರಧಾನಿ ಮೋದಿ ಹಾಗೂ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ, ಯೋಜನೆಯ ಬಗ್ಗೆ ವಿವರಿಸಿದ್ದರು. ಇದೀಗ ಆಯೋಗ ವರದಿಯನ್ನು ಒಪ್ಪಿಕೊಂಡಿದೆ.

ಆಯೋಗದ ಅಧಿಕೃತ ಆದೇಶ ಕೈ ಸೇರಿದ ಬಳಿಕ ಸಂಪೂರ್ಣ ವರದಿ ಸಿದ್ಧಪಡಿಸಿ, ಸೂಚನೆಯಂತೆಯೇ ಪರಿಷ್ಕೃತ ಯೋಜನಾ ವರದಿಯನ್ನು ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment