ರಾಷ್ಟ್ರ ಸುದ್ದಿ

ರಾಜ್ಯದ ರೈತರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ

ಕೆಲ ತಿಂಗಳ ಹಿಂದೆಯಷ್ಟೇ ಕಾಳುಮಣಸಿಗೆ ಕನಿಷ್ಠ ಆಮದು ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿ ಕಾಳು ಮೆಣಸು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು. ಇದೀಗ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಮತ್ತೊಮ್ಮೆ ರೈತರ ನೆರವಿಗೆ ಮುಂದಾಗಿದ್ದು ಹೊರದೇಶಗಳಿಂದ ಕಾಳುಮೆಣಸನ್ನು ಆಮದು ಮಾಡಿಕೊಳ್ಳುವುದನ್ನೇ ನಿರ್ಬಂಧಿಸಿ ಆದೇಶಿಸಿದ್ದಾರೆ.

ನೂತನ ಪರಿಷ್ಕರಣಿ ನೀತಿಯ ಪ್ರಕಾರ ಮೋದಿ ಸರ್ಕಾರ ಕಾಳುಮೆಣಸು ಆಮದು ನಿರ್ಬಂಧಿಸಿದ್ದು, ಆಮದು ದರ ಪ್ರತಿ ಕೆಜಿಗೆ 500 ರೂ.ಗಿಂತ ಅಧಿಕವಾದರೆ ಇದು ಅನ್ವಯವಾಗುವುದಿಲ್ಲ. ಕಳೆದ ಡಿಸ್ಂಬರ್ ನಲ್ಲಿ ಕಾಳುಮೆಣಸು ಆಮದು ದರವನ್ನು ಪ್ರತಿ ಕೆ.ಜಿ.ಗೆ 500 ರೂ. ನಿಗದಿ ಪಡಿಸಲಾಗಿತ್ತು. ಆದರೆ ಆಮದು ನಿಷೇಧಿಸಿರಲಿಲ್ಲ. ಇದರಿಂದಾಗಿ ಕೆಲವು ಆಮದುದಾರರು ದಂಡ ಪಾವತಿಸಿ ಸಾರ್ಕ್ ದೇಶಗಳ ಮೂಲಕ ಕಡಿಮೆ ಬೆಲೆಗೆ ಭಾರತಕ್ಕೆ ಕಾಳುಮೆಣಸು ಆಮದು ಮಾಡಿಕೊಳ್ಳುವ ತಂತ್ರ ಅನುಸರಿಸಿದ್ದರು. ಹಾಗಾಗಿ ಹಲವಾರು ರೈತರಿಗೆ ಅನ್ಯಾಯವಾಗಿತ್ತು. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರೂ, ಕೆಲ ಮಧ್ಯ ವರ್ತಿಗಳ ಹಾವಳಿಯಿಂದ ಕಾಳುಮೆಣಸು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿತ್ತು.

ಹೊರ ದೇಶದಿಂದ ಆಮದು ಮಾಡಿಕೊಳ್ಳುವುದರ ಪರಿಣಾಮವಾಗಿ ಸ್ಥಳೀಯ ಕಾಳುಮೆಣಸಿನ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕಾಳುಮೆಣಸಿನ ಬೆಳೆಗಾರರ ಸಂಘಗಳ ಒಕ್ಕೂಟದ ಅಧಿಕಾರಿಗಳು ಸತತವಾಗಿ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಿ, ಸಮಸ್ಯೆಯನ್ನು ಮನಗಾಣಿಸಿದ್ದರು. ಫೆಬ್ರುವರಿ 20ರಂದು ಒಕ್ಕೂಟ ಸಚಿವರಿಗೆ ಪತ್ರ ಬರೆದು ಆಮದು ನಿಷೇಧ ಹೇರುವಂತೆ ಒತ್ತಾಯಿಸಿದ್ದರು. ಕೇಂದ್ರ ಸರ್ಕಾರದ ಹೊಸ ಆದೇಶದಿಂದ ಮತ್ತೆ ಕಾಳುಮೆಣಸು ಮಾರುಕಟ್ಟೆ ಚಿಗಿತುಕೊಳ್ಳಲಿದೆ. ಕಾಳುಮೆಣಸು ಆಮದು ನಿಷೇಧಿಸಿದ್ದು ಸೂಕ್ತ, ಹಾಗೂ ಬೆಳೆಗಾರರನ್ನು ರಕ್ಷಿಸುವ ಕ್ರಮ ಎಂದು ರೈತರು ಹರ್ಷ ವ್ಯಕ್ತ ಪಡಿಸಿದ್ದಾರೆ. ಮೋದಿ ಸರ್ಕಾರ ಕಾಳುಮೆಣಸು ಬೆಳೆಗಾರರ ಸಮಸ್ಯೆಯನ್ನ ಅರ್ಥೈಸಿಕೊಂಡು ಆಮದು ನಿಷೇಧ ಮಾಡಿರುವದರಿಂದ ಕಾಳು ಮೆಣಸು ಧಾರಣೆ ಮೇಲೆರಲಿದೆ..

About the author

ಕನ್ನಡ ಟುಡೆ

Leave a Comment