ರಾಜಕೀಯ

ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ, ಜವಾಬ್ದಾರಿಯ ವಿಮುಕ್ತಿಗೆ ಕೇಳಲಿದ್ದೇನೆ: ವಿಶ್ವನಾಥ್​

ಬೆಂಗಳೂರು: ಜೆಡಿಎಸ್​ನ ರಾಜ್ಯಾಧ್ಯಕ್ಷ ಹುದ್ದೆಗೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಬದಲಿಗೆ ಅನಾರೋಗ್ಯದ ಕಾರಣದ ಹಿನ್ನೆಲೆಯಲ್ಲಿ ನನ್ನನ್ನು ಹುದ್ದೆಯಿಂದ ಬಿಡುಗಡೆ ಮಾಡಿ ಎಂದು ರಾಷ್ಟ್ರಾಧ್ಯಕ್ಷ ದೇವೇಗೌಡರನ್ನು ಕೇಳಬೇಕಿಂದಿದ್ದೇನೆ ಎಂದಷ್ಟೇ ಹೇಳಿದ್ದೇನೆ, ಎಂದು ಜೆಡಿಎಸ್​ನ ರಾಜ್ಯಾಧ್ಯಕ್ಷ ವಿಶ್ವನಾಥ್​ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಎಚ್​. ವಿಶ್ವನಾಥ್​ ನಿರ್ಧರಿಸಿದ್ದಾರೆ ಎಂಬ ಊಹಾಪೋಹಗಳ ಕುರಿತು ಮಾತನಾಡಿರುವ ಅವರು, ಪಕ್ಷದ ಸಂಘಟನೆ ಮಾಡಲು ನನ್ನ ಆರೋಗ್ಯ ಸ್ಪಂದಿಸುತ್ತಿಲ್ಲ. ಹಾಗಾಗಿ ಜವಾಬ್ದಾರಿಯಿಂದ ವಿಮುಕ್ತನನ್ನಾಗಿ ಮಾಡಿ ಎಂದು ದೇವೇಗೌಡರಲ್ಲಿ ಜ.3ರಂದು ಕೋರಿಕೆ ಸಲ್ಲಿಸಲು ತೀರ್ಮಾನಿಸಿದ್ದೇನೆ. ಅವರು ಸೂಚಿಸಿದಂತೆ ನಡೆಯುತ್ತೇನೆ, ಎಂದು ಹೇಳಿದರು.

ಅಲ್ಲದೆ, ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಲು ಅವರು ಸಹಾಯ ಮಾಡಿದ್ದಾರೆ. ದೇವೇಗೌಡರು ಹಿರಿಯರು. ಹೆಚ್ಚು ಅನುಭವ ಹೊಂದಿದವರು ಅವರು ಹೇಳಿದಂತೆಯೇ ಕೇಳುತ್ತೇನೆ. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ನನ್ನನ್ನು ಸಮರ್ಥ ಎಂದೇ ಹೇಳುತ್ತಿರುವ ಅವರದ್ದು ವಿಶಾಲ ಮನೋಭಾವ, ಎಂದೂ ಅವರು ತಿಳಿಸಿದರು.

ಇನ್ನು ಲೋಕಸಭೆ ಚುನಾವಣೆ ತಯಾರಿಯ ಕುರಿತು ಮಾತನಾಡಿದ ಅವರು, “ಚುನಾವಣೆ ಕುರಿತು ಚರ್ಚಿಸಲು ಜ.3ರಂದು ಸಭೆಯ ಕರೆಯಲಾಗಿದೆ. ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ, ದೇವೇಗೌಡರು, ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕ, ಸಂಸದರನ್ನು ಸಭೆಗೆ ಕರೆಯಲಾಗಿದೆ,” ಎಂದು ಅವರು ಹೇಳಿದರು.

About the author

ಕನ್ನಡ ಟುಡೆ

Leave a Comment