ರಾಜಕೀಯ

ರಾಜ್ಯ ಕಾಂಗ್ರೆಸಿಗರಿಗೆ ಯಾವ ಕಿಮ್ಮತ್ತೂ ಕೊಡಬೇಡಿ: ಜೆಡಿಎಸ್‌ ಶಾಸಕರ ಒತ್ತಾಯ

ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಸೀಟು ಹೊಂದಾಣಿಕೆ ವಿಚಾರದಲ್ಲಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರು ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರೊಂದಿಗೆ ಮಾತ್ರ ವ್ಯವಹರಿಸಬೇಕೆಂದು ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ತಾಕೀತು ಮಾಡಿದೆ. ಖಾಸಗಿ ಹೋಟೆಲ್‌ನಲ್ಲಿ ಎಚ್‌.ಡಿ.ದೇವೇಗೌಡ ಹಾಗೂ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ ಶಾಸಕರು, ಮೇಲ್ಮನೆ ಸದಸ್ಯರ ಸುದೀರ್ಘ ಸಭೆ ನಡೆಯಿತು. ಚುನಾವಣಾ ಮೈತ್ರಿ ಮಾತುಕತೆ ರಾಜ್ಯ ಕಾಂಗ್ರೆಸ್‌ ನಾಯಕರೊಂದಿಗೆ ಬೇಡವೇ ಬೇಡ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಜೆಡಿಎಸ್‌ ಸಚಿವರ ಖಾತೆಗಳ ವ್ಯಾಪ್ತಿಯ ನಿಗಮಗಳಿಗೂ ಕಾಂಗ್ರೆಸಿಗರು ತಮ್ಮಿಷ್ಟದಂತೆ ಶಾಸಕರನ್ನು ನೇಮಿಸಿಕೊಂಡು ತಗಾದೆ ಸೃಷ್ಟಿಸಿದ್ದಾರೆ. ರಾಜ್ಯ ಕಾಂಗ್ರೆಸ್‌ ನಾಯಕರೊಟ್ಟಿಗೆ ವ್ಯವಹರಿಸುವುದರಿಂದ ಮೈತ್ರಿ ಸರಕಾರದಲ್ಲಿ ಗೊಂದಲಗಳು ಮುಂದುವರಿಯುತ್ತವೆ. ಹೀಗಾಗಿ, ಎಐಸಿಸಿ ವರಿಷ್ಠರೊಂದಿಗೆ ನೇರವಾಗಿ ದೇವೇಗೌಡರು ವ್ಯವಹರಿಸಬೇಕು. ಮೈಸೂರು, ಮಂಡ್ಯ, ಹಾಸನ, ಚಿತ್ರದುರ್ಗ, ಬೆಂಗಳೂರು ಉತ್ತರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ 12 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ರಾಹುಲ್‌ಗಾಂಧಿ ಮೇಲೆ ಒತ್ತಡ ತರಬೇಕು ಎಂದು ಶಾಸಕರು ಆಗ್ರಹಿಸಿದರು.

ಜೆಡಿಎಸ್‌ ಶಾಸಕರ ವಿರೋಧ : ನಿಗಮ, ಮಂಡಳಿ ನೇಮಕ ವಿಚಾರದಲ್ಲಿ ಮೈತ್ರಿ ಸರಕಾರದಲ್ಲಿ ಸೃಷ್ಟಿಯಾಗಿರುವ ಗೊಂದಲಕ್ಕೆ ಇದೀಗ, ಜೆಡಿಎಸ್‌ ಶಾಸಕರೂ ತುಪ್ಪ ಸುರಿದಿದ್ದಾರೆ. ಜೆಡಿಎಸ್‌ಗೆ ಸಚಿವರ ಖಾತೆಗಳ ಅಧೀನದ ನಿಗಮ -ಮಂಡಳಿಗಳಿಗೆ ಕಾಂಗ್ರೆಸ್‌ ಏಕಪಕ್ಷೀಯವಾಗಿ ತನ್ನ ಶಾಸಕರನ್ನು ನೇಮಕ ಮಾಡಿದ್ದು ಸರಿಯಲ್ಲ. ಈ ಶಿಫಾರಸುಗಳಿಗೆ ಸಿಎಂ ಯಾವ ಕಾರಣಕ್ಕೂ ಸಹಿ ಹಾಕಬಾರದು ಎಂಬ ಒತ್ತಾಯ ವ್ಯಕ್ತವಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ”ನಿಗಮ ಮಂಡಳಿಗಳ ನೇಮಕ ವಿಚಾರದಲ್ಲಿ ಕಾಂಗ್ರೆಸ್‌ ಧೋರಣೆಯಿಂದ ನಮಗೆಲ್ಲಾ ಬೇಸರವಾಗಿರುವುದು ನಿಜ. ಆದರೆ, ಮೈತ್ರಿ ಸರಕಾರದಲ್ಲಿ ಬಹಿರಂಗವಾಗಿ ಹೇಳಿಕೊಳ್ಳಬಾರದು ಎಂಬ ಕಾರಣಕ್ಕೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿದ್ದೇವೆ,”ಎಂದು ಹೇಳಿದರು.

ತ್ಯಾಗದ ಮಾತಿಗೆ ಗಪ್‌ಚುಪ್‌ : ಸಭೆಯ ಆರಂಭದಲ್ಲೇ ಮಾತನಾಡಿದ ದೇವೇಗೌಡರು ”ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿಕೊಂಡು ಸರಕಾರ ನಡೆಸುವುದು ಅನಿವಾರ್ಯ. ಈ ವಿಚಾರದಲ್ಲಿ ಎಲ್ಲರೂ ಸಹಕರಿಸಬೇಕು. ಸಂಕ್ರಾಂತಿ ಬಳಿಕ ಎರಡು ಸಚಿವ ಸ್ಥಾನಗಳನ್ನೂ ತುಂಬಲಾಗುವುದು. ಪಕ್ಷದ ಮುಖಂಡರಿಗೆ 10, 15 ವರ್ಷಗಳಿಂದ ಯಾವ ಸ್ಥಾನಮಾನವೂ ಸಿಕ್ಕಿಲ್ಲ. ಇದೇ ಸ್ಥಿತಿಯಲ್ಲಿ ಲೋಕಸಭೆ ಚುನಾವಣೆಗೆ ಮುಖಂಡರು ಮತ್ತು ಮಾಜಿ ಶಾಸಕರಿಂದ ಕೆಲಸ ತೆಗೆದುಕೊಳ್ಳುವುದು ಕಷ್ಟ ಎಂಬುದು ನಿಮಗೂ ಗೊತ್ತಿದೆ. ಹೀಗಾಗಿ, ನಿಗಮ -ಮಂಡಳಿ ಅವಕಾಶಗಳನ್ನು ಚುನಾವಣೆಯಲ್ಲಿ ಸೋತವರಿಗಾಗಿ ತ್ಯಾಗ ಮಾಡಿ. ಶಾಸಕರ ಕ್ಷೇತ್ರಾಭಿವೃದ್ದಿಗೆ ಹೆಚ್ಚಿನ ಅನುದಾನ ದೊರಕಿಸಿಕೊಡಲಾಗುವುದು” ಎಂಬ ದೇವೇಗೌಡರ ಮನವಿಗೆ ಯಾವ ಶಾಸಕರೂ ತುಟಿಬಿಚ್ಚದೆ ಮೌನತಾಳಿದರು.

ದೇವೇಗೌಡರಿಗೆ ಅಧಿಕಾರ : ನಿಗಮ -ಮಂಡಳಿಗಳ ನೇಮಕ, ಸಂಸದೀಯ ಕಾರ್ಯದರ್ಶಿಗಳು ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನೇಮಕದ ಅಧಿಕಾರವನ್ನು ದೇವೇಗೌಡರಿಗೆ ಸಭೆ ನೀಡಿತು. ಈ ತೀರ್ಮಾನದಂತೆ 10 ನಿಗಮ -ಮಂಡಳಿಗಳ ಅಧ್ಯಕ್ಷರು, ನಾಲ್ವರು ಸಂಸದೀಯ ಕಾರ್ಯದರ್ಶಿಗಳು, ಒಬ್ಬ ರಾಜಕೀಯ ಕಾರ್ಯದರ್ಶಿ ಹಾಗೂ ಮುಖ್ಯ ಸಚೇತಕರ ನೇಮಕ ಸಂಬಂಧ ಒಂದೆರಡು ದಿನಗಳಲ್ಲಿ ನೇಮಕ ಪಟ್ಟಿ ಸಿದ್ಧ ಪಡಿಸಿ ಸಂಕ್ರಾಂತಿ ಹಬ್ಬದ ಬಳಿಕ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ.

ಮೇಲ್ವರ್ಗದ ಮೀಸಲಾತಿಗೆ ಬೆಂಬಲ : ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ಮೀಸಲು ಕಲ್ಪಿಸುವ ಕೇಂದ್ರ ಸರಕಾರ ತೀರ್ಮಾನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಬೆಂಬಲ ಸೂಚಿಸಿದ್ದಾರೆ.

”ಕೇಂದ್ರ ಸರಕಾರ ಈ ಸಂಬಂಧ ಸಂಸತ್ತಿನಲ್ಲಿ ವಿಧೇಯಕ ಮಂಡಿಸಿದೆ. ಆದರೆ, ಉದ್ದೇಶಿತ ಕಾಯಿದೆ ಕುರಿತಂತೆ ವಿವರ ಗೊತ್ತಿಲ್ಲ. ಆದರೆ, ಮೀಸಲು ಪ್ರಮಾಣ ಶೇ.50 ಮೀರಬಾರದು ಎಂದು ಸುಪ್ರೀಂಕೋರ್ಟ್‌ 9 ನ್ಯಾಯಾಧೀಶರ ಪೀಠ ತೀರ್ಪು ನೀಡಿದ್ದು, ಕೇಂದ್ರ ಸರಕಾರ ರೂಪಿಸುವ ಕಾಯಿದೆಯನ್ನು ಪ್ರಶ್ನಿಸಿ ಯಾರಾದರೂ ಕೋರ್ಟ್‌ ಮೆಟ್ಟಿಲೇರಬಹುದು. ಕಾನೂನು ತೊಡಕುಗಳನ್ನು ನೋಡಿಕೊಂಡು ಮುಂದುವರಿಯಬೇಕಿದೆ” ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment