ರಾಜ್ಯ ಸುದ್ದಿ

ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದ ಆಡಿಯೋ: ಶ್ರೀರಾಮುಲು ಪಿಎ-ದುಬೈ ಉದ್ಯಮಿ ಸಂಭಾಷಣೆ ವೈರಲ್‍

ಬೆಂಗಳೂರು:  ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಪುನಃ ವೇದಿಕೆ ಸಿದ್ದವಾಗಿದೆ ಎಂಬ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಆತಂಕ ಸೃಷ್ಟಿಯಾಗಿದ್ದು, ಇದಕ್ಕೆ ಮತ್ತಷ್ಟು  ಪುಷ್ಠಿ ನೀಡುವಂತೆ ಸಂಭಾಷಣೆ ಒಳಗೊಂಡ ಆಡಿಯೋ ಬಹಿರಂಗವಾಗಿದೆ.
ಶಾಸಕ ಬಿ.ಶ್ರೀರಾಮುಲು ಅವರ ಆಪ್ತ ಸಹಾಯಕ ಎನ್ನಲಾದ ವ್ಯಕ್ತಿ ದುಬೈ ಮೂಲದ ಅನಾಮಧೇಯ ವ್ಯಕ್ತಿಯ ಜತೆ ‘ಆಪರೇಷನ್‌ ಕಮಲ’ಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸಿದ ಸಿಡಿ ಸೋಮವಾರ ಬಹಿರಂಗಗೊಂಡಿದೆ. ಆದರೆ ಈ ಆಡಿಯೊವನ್ನು ಬಿಜೆಪಿ ಖಡಾಖಂಡಿತವಾಗಿ ನಿರಾಕರಿಸಿದ್ದು, ತಮ್ಮ ದೋಷಗಳನ್ನು ಮುಚ್ಚಿಕೊಳ್ಳಲು ಸರ್ಕಾರವೇ ನಕಲಿ ಆಡಿಯೊ ಬಿಡುಗಡೆ ಮಾಡಿದೆ ಎಂದು ಆರೋಪಿಸಿದೆ. ಸರಕಾರಕ್ಕೆ ಸವಾಲು ಹಾಕಿರುವ ಬಿಜೆಪಿ ರಾಜ್ಯ ವಕ್ತಾರ ಸಿ.ಟಿ.ರವಿ ಈ ಆಡಿಯೊ ಬಗ್ಗೆ ಬೇಕಾದರೆ ಸರಕಾರ ಸಿಬಿಐ ತನಿಖೆಗೆ ಶಿಫಾರಸು ಮಾಡಲಿ ಎಂದು ಹೇಳಿದ್ದಾರೆ.
ಶ್ರೀರಾಮುಲು ಕೂಡಾ ಈ ಆಡಿಯೊ ವಿಚಾರವನ್ನು ನಿರಾಕರಿಸಿದ್ದು, ”ನನ್ನ ಆಪ್ತ ಸಹಾಯಕನಿಗೆ ಹಿಂದಿ ಬರುವುದಿಲ್ಲ. ಹೀಗಾಗಿ ದುಬೈ ಉದ್ಯಮಿಯನ್ನು ಸಂಪರ್ಕಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಒಂದೊಮ್ಮೆ ಸಂಪರ್ಕಿಸಬೇಕಿದ್ದರೆ ನೇರವಾಗಿಯೇ ಮಾತನಾಡುತ್ತೇವೆ. ಆಪರೇಷನ್‌ ಕಮಲ ನಡೆಸುವ ಅಗತ್ಯ ಬಿಜೆಪಿಗೆ ಇಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ಆಡಿಯೊದಲ್ಲಿ ಶ್ರೀರಾಮುಲು ಆಪ್ತ ಸಹಾಯಕ ಮಂಜುನಾಥ ಎಂಬಾತ ದುಬೈ ಉದ್ಯಮಿಯ ಜತೆ ದೂರವಾಣಿಯಲ್ಲಿ ಮಾತನಾಡುತ್ತಾ ”ಕಾಂಗ್ರೆಸ್‌ನಿಂದ 25 ಶಾಸಕರು ಬರಲು ಸಿದ್ಧರಾಗಿದ್ದಾರೆ.  ಪ್ರತಿ ಶಾಸಕರಿಗೆ 25 ಕೋಟಿ ರು ಹಣ ನೀಡಬೇಕಾಗಿದೆ. ಅದಕ್ಕಾಗಿ ಅಪಾರ ಮೊತ್ತದ ಹಣದ ಅಗತ್ಯವಿದೆ, ಎಂದು ಸಂಭಾಷಣೆ ನಡೆಸಲಾಗಿದೆ. ಕಾಂಗ್ರೆಸ್ ಶಾಸಕರಾದ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಭೀಮಾನಾಯಕ್, ನಾಗೇಂದ್ರ, ಬಿ,ಸಿ ಪಾಟೀಲ್, ಆನಂದ್ ಸಿಂಗ್, ಜೆಎನ್ ಗಣೇಶ್, ಪ್ರತಾಪ ಗೌಡ ಪಾಟೀಲ್ ಹಾಗೂ ಪಕ್ಷೇತರ ಅಭ್ಯರ್ಥಿ ನಾಗೇಶ್ ತಮ್ಮ ಸಂಪರ್ಕದಲ್ಲಿದ್ದು, ಅವರೆಲ್ಲರೂ ಬಿಜೆಪಿದೆ ಬರಲಿದ್ದಾರೆ ಎಂದು ಸಂಭಾಷಣೆಯಲ್ಲಿ ಉಲ್ಲೇಖಿಸಲಾಗಿದೆ, ಅವರಿಗೆಲ್ಲ ಹಣ ನೀಡಲುಆದಷ್ಟು ಶೀಘ್ರ ಹಣ ಹೊಂದಿಸಬೇಕೆಂಬ ವಿಷಯ ಕುರಿತು ಮಾತನಾಡಲಾಗಿದೆ. ಇನ್ನೂ ಆಡಿಯೋ ಸಂಭಾಷಣೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಿ.ಸಿ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ. ಯಾರು ನನ್ನನ್ನು ಸಂಪರ್ಕಿಸಿಲ್ಲ, ನಾನು ಸಚಿವ ಸ್ಥಾನದ ಆಕಾಂಕ್ಷಿ. ಆದರೆ ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಈ ಪರಿಸ್ಥಿತಿಯಿಲ್ಲ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment