ಸುದ್ದಿ

ರಾಜ್ಯ ಸಾರಿಗೆ ಸಂಸ್ಥೆಯಿಂದ ಈ ಬಾರಿ ಐದು ಸಾವಿರ ಹೊಸ ಬಸ್ ಖರೀದಿ: ರಾಮಲಿಂಗಾರೆಡ್ಡಿ

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈ ವರ್ಷ ಐದು ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಖರೀದಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಎಂಟು ಲಕ್ಷದಿಂದ ಎಂಟೂವರೆ ಲಕ್ಷ ಕಿಲೋಮೀಟರುಗಳಷ್ಟು ದೂರ ಓಡಿದ ಬಸ್ಸುಗಳನ್ನು ತೆಗೆದು ಹಾಕಿ ಹೊಸ ಬಸ್ಸುಗಳನ್ನು ಖರೀದಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ, ಈಶಾನ್ಯ ಸಾರಿಗೆ ಸಂಸ್ಥೆ, ವಾಯುವ್ಯ ಸಾರಿಗೆ ಸಂಸ್ಥೆ, ಬಿಎಂಟಿಸಿ ಸೇರಿದಂತೆ ಎಲ್ಲೆಡೆ ಸೇರಿ ಒಟ್ಟು ಐದು ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಖರೀದಿಸಲಾಗುತ್ತಿದ್ದು, ಅದೇ ಕಾಲಕ್ಕೆ ಈ ವರ್ಷ ಹೊಸತಾಗಿ ನಾಲ್ಕು ಸಾವಿರ ಮಂದಿ ಸಿಬ್ಬಂದಿಯನ್ನು ರಸ್ತೆ ಸಾರಿಗೆ ಸಂಸ್ಥೆಗೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಕೇಂದ್ರ ಸರ್ಕಾರ ಈ ಹಿಂದಿನಂತೆ ನರ್ಮ್ ಯೋಜನೆಯಡಿ ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಹೆಚ್ಚು ಆದ್ಯತೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂಚೆ ನರ್ಮ್ ಯೋಜನೆಯಡಿ ನಿರ್ದಿಷ್ಟ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರ ಒದಗಿಸುತ್ತಿತ್ತು. ಇದರಿಂದಾಗಿ ಕೆಎಸ್‌ಆರ್‌ಟಿಸಿಗೆ ಖರೀದಿ ಮಾಡುವ ಬಸ್‌ಗಳಿಗೆ ಕೇಂದ್ರ ಸರ್ಕಾರ ಶೇ. 80ರಷ್ಟು ಹಾಗೂ ಬಿಎಂಟಿಸಿಗೆ ಖರೀದಿಸುವ ಬಸ್ಸಿಗೆ ಶೇ. 50ರಷ್ಟು ಹಣವನ್ನು ಒದಗಿಸುತ್ತಿತ್ತು. ಹಾಗೆಯೇ ಹೊಸ ಡಿಪೋಗಳನ್ನು ನಿರ್ಮಿಸುವುದರಿಂದ ಹಿಡಿದು ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಕೆಲಸಗಳಿಗೆ ಹಣ ಲಭ್ಯವಾಗುತ್ತಿತ್ತು.

ಆದರೆ, ಈಗ ಕೇಂದ್ರ ಸರ್ಕಾರ ಅಮೃತ ಎಂಬ ಯೋಜನೆಯನ್ನು ಮಾಡಿದ್ದು, ಅದರಡಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಹಲವು ರೀತಿಯ ಯೋಜನೆಗಳಿಗೆ ಆದ್ಯತೆ ನೀಡಲು ಸೂಚನೆ ನೀಡಿದೆ. ಈ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಉಳಿಯುವ ಹಣವನ್ನು ಸಾರಿಗೆ ಸಂಸ್ಥೆಗೆ ಒದಗಿಸುವಂತೆ ಅದು ಹೇಳಿದೆ. ಪರಿಣಾಮವಾಗಿ ಇಂತಹ ಕೆಲಸಗಳಿಗೆ ಹಣ ಬಳಕೆಯಾದ ಮೇಲೆ ನಮಗೆ ಕೊಡಲು ಎಲ್ಲಿಂದ ಹಣ ಲಭ್ಯವಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಕಾರಣಕ್ಕಾಗಿ ಕೇಂದ್ರ ಸಚಿವರಾದ ಅನಂತಕುಮಾರ್ ಅವರಿಂದ ಹಿಡಿದು ನಿರ್ಮಲಾ ಸೀತಾರಾಮನ್ ಅವರವರೆಗೆ ಮನವಿ ನೀಡಿ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡುವಂತೆ ಕೋರಲಾಗಿದೆ ಎಂದರು.

ಕೆಎಸ್‌ಆರ್‌ಟಿಸಿಯಲ್ಲಿ 1.15 ಕೋಟಿ ಜನ ಸಂಚರಿಸುತ್ತಿದ್ದರೆ, ಬಿಎಂಟಿಸಿಯಲ್ಲಿ 58 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ ಸಚಿವರು, ರಾಜ್ಯಕ್ಕೆ 150 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಕಾಯಲಾಗುತ್ತಿದೆ ಎಂದರು.

About the author

ಕನ್ನಡ ಟುಡೆ

Leave a Comment