ರಾಜ್ಯ ಸುದ್ದಿ

ರಾಮನಗರದಲ್ಲಿ ಇನ್ನು 10 ಜನ ಅಭ್ಯರ್ಥಿ ನಿಂತರೂ ಭಯಪಡುವುದಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು: ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ವಾಪಸಾತಿಗೆ ದೈವ ಪ್ರೇರಣೆ ಕಾರಣ ಇರಬಹುದು. ಹಣಕೊಟ್ಟು ಖರೀದಿಸುವ ಅಗತ್ಯ ನನಗಿಲ್ಲ. ನಾನು ಹೋಗದೆಯೇ ರಾಮನಗರ ಜನತೆ ನನ್ನ ಗೆಲ್ಲಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರು ಟ್ರಾಮಾ ಕೋರ್ಸ್ 2018ಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನಗರದಲ್ಲಿ ಆಮಿಷವೊಡ್ಡಿ ಚುನಾವಣೆ ನಡೆಸುವ ಅಗತ್ಯ ನನಗಿಲ್ಲ. ಇನ್ನು 10 ಜನ ಅಭ್ಯರ್ಥಿಗಳು ನಿಂತರೂ ಕೂಡ ರಾಮನಗರದಲ್ಲಿ ನನಗೆ ಯಾವುದೇ ಭಯ ಇಲ್ಲ. ಅಲ್ಲಿನ ಜನ ನನ್ನನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು.

ಮದ್ಯ ಆನ್‌ಲೈನ್‌ ಮಾರಾಟ ವಿಚಾರವಾಗಿ ನಾನು ಸಿಎಂ ಆಗುವುದಕ್ಕೆ ಮುನ್ನ ತೀರ್ಮಾನವಾಗಿದೆ. ಅದನ್ನು ತಕ್ಷಣ ನಿಲ್ಲಿಸಲು ಹೇಳಿದ್ದೇನೆ. ಸರ್ಕಾರದ ಬೊಕ್ಕಸಕ್ಕೆ ಆದಾಯ ಸೋರಿಕೆ ಆಗಲು ಅವಕಾಶ ಕೊಡುವುದಿಲ್ಲ. ಯಾರೋ ಮಧ್ಯವರ್ತಿಗಳಿಗೆ ಲಾಭ ಮಾಡಿಕೊಳ್ಳಲು ಅವಕಾಶ ಕೊಡಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಎಚ್.ಡಿ. ಕುಮಾರಸ್ವಾಮಿ ಬಂದ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳವಾದ ಬಗ್ಗೆ ಆಯನೂರು ಮಂಜುನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಹೋಗಿ ಬಂದ ನಂತರ ಬಿಜೆಪಿಯವರು ಭಯ ಬಿದ್ದಿದ್ದಾರೆ. ಅದಕ್ಕೆ ಮದ್ಯ ಮಾರಾಟ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ನಾಡಿನ ಜನತೆಗೆ ದೀಪಾವಳಿ ಮಾತ್ರವಲ್ಲ ಪ್ರತಿ ತಿಂಗಳೂ ಒಂದೊಂದು ಸಿಹಿ ಸುದ್ದಿ ಕೊಡಲೆಂದು ಸಾಕಷ್ಟು ಯೋಜನೆ ಸಿದ್ಧಪಡಿಸಿಕೊಂಡಿದ್ದೇನೆ. ಚುನಾವಣೆ ಬಳಿಕ ಮುಂದಿನ ತಿಂಗಳಲ್ಲಿ ರೈತರ ಬೃಹತ್ ಸಮಾವೇಶ ಏರ್ಪಡಿಸಿ ಋಣಮುಕ್ತ ಪ್ರಮಾಣಪತ್ರ ವಿತರಿಸಲಾಗುತ್ತದೆ ಎಂದರು.

About the author

ಕನ್ನಡ ಟುಡೆ

Leave a Comment