ರಾಜಕೀಯ

ರಾಮನಗರದಲ್ಲಿ ಬಂಡಾಯ ಭೀತಿ: ಕಾಂಗ್ರೆಸ್‌ಗೆ ಉಪಸಮರ ಬಿಸಿ

ಬೆಂಗಳೂರು: ಜೆಡಿಎಸ್‌ ಜತೆಗಿನ ಮೈತ್ರಿ ಬಲದೊಂದಿಗೆ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ನಿರಾಯಾಸವಾಗಿ ಎದುರಿಸುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್‌ಗೆ ಆರಂಭದಲ್ಲೇ ಆಘಾತ ಎದುರಾಗಿದೆ. ಅಭ್ಯರ್ಥಿಗಳ ಆಯ್ಕೆಯ ಕಸರತ್ತಿನ ಹಂತದಲ್ಲೆ ಕಾಂಗ್ರೆಸ್‌ಗೆ ಬಿಸಿ ತಟ್ಟತೊಡಗಿದೆ. ಬಳ್ಳಾರಿ, ಶಿವಮೊಗ್ಗ ಕ್ಷೇತ್ರಗಳ ಉಮೇದುವಾರರ ಆಯ್ಕೆ ಕಾಂಗ್ರೆಸ್‌ಗೆ ಕಗ್ಗಂಟಾಗಿ ಪರಿಣಮಿಸಿದೆ. ಇದು ಸಾಲದೆಂಬಂತೆ, ರಾಮನಗರ ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಸಿ.ಎಂ. ಲಿಂಗಪ್ಪ ಪುತ್ರ ಚಂದ್ರಶೇಖರ್‌ ಬಿಜೆಪಿ ಸೇರಿದ್ದಾರೆ. ಬಳ್ಳಾರಿ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಉಲ್ಬಣಗೊಳ್ಳುವ ಲಕ್ಷಣ ಕಾಣಿಸಿದೆ. ಉಪ ಚುನಾವಣೆಯ ಉಸಾಬರಿಯೇ ಬೇಡವೆಂದು ಶಿವಮೊಗ್ಗದ ನಾಯಕರು ಶಸ್ತ್ರತ್ಯಾಗ ಮಾಡಲು ಮುಂದಾಗಿದ್ದಾರೆ. ರಾಮನಗರ ಕ್ಷೇತ್ರವನ್ನು ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನವಾಗಿದ್ದರೂ ಬಂಡಾಯದ ಬಾವುಟ ಹಾರಿಸುವ ಸುಳಿವನ್ನು ಸ್ಥಳೀಯ ಕಾಂಗ್ರೆಸಿಗರು ನೀಡಿದ್ದಾರೆ. ಈ ಬೆಳವಣಿಗೆಯಿಂದ ಕಾಂಗ್ರೆಸ್‌ ನಾಯಕರು ಕಂಗೆಡುವಂತಾಗಿದೆ.

ದೋಸ್ತಿ ಸರಕಾರದ ಪ್ರಭಾವಿ ಸಚಿವ ಡಿ. ಕೆ. ಶಿವಕುಮಾರ್‌ ಆಪ್ತರಾದ ಸಿ.ಎಂ. ಲಿಂಗಪ್ಪ ಅವರಿಗೂ ರಾಮನಗರವನ್ನು ಜೆಡಿಎಸ್‌ ತೆಕ್ಕೆಗೆ ವಹಿಸುವುದು ಇಷ್ಟವಿಲ್ಲ. ಮೈತ್ರಿ ಸರಕಾರದ ‘ಭದ್ರ ಕಾವಲುಗಾರ’ನಂತೆ ಇರುವ ಡಿಕೆಶಿ ಅವರಿಗೆ ತವರು ಜಿಲ್ಲೆಯಲ್ಲಿನ ಈ ಬೆಳವಣಿಗೆ ಇಕ್ಕಟ್ಟು ತಂದಿದೆ. ಲಿಂಗಪ್ಪ ಪುತ್ರ ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್‌ಗೆ ಮತ್ತೊಂದು ಇರಸುಮುರಸು ಎದುರಾಗುವಂತಾಗಿದೆ. ಶಿವಕುಮಾರ್‌ ಅವರು ಬಳ್ಳಾರಿ ಜಿಲ್ಲೆ ಉಸ್ತುವಾರಿಯನ್ನೂ ಹೊಂದಿದ್ದು, ಈ ಕ್ಷೇತ್ರದ ಉಮೇದುವಾರರ ಆಯ್ಕೆಯೂ ಬಾಕಿಯಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ನಿರ್ದೇಶನದಂತೆ ಬಳ್ಳಾರಿ ಶಾಸಕರು, ಮುಖಂಡರೊಂದಿಗೆ ಡಿಕೆಶಿ ಬುಧವಾರ ಸಭೆ ನಡೆಸಿದರು. ಶಾಸಕರಾದ ಆನಂದ್‌ ಸಿಂಗ್‌, ಪಿ.ಟಿ. ಪರಮೇಶ್ವರ್‌ ನಾಯ್ಕ್‌, ಭೀಮಾ ನಾಯ್ಕ್‌, ಮಾಜಿ ಸಚಿವ ಸಂತೋಷ್‌ ಲಾಡ್‌ ಸಭೆಯಿಂದ ದೂರವುಳಿದರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರ ಅವರ ಸಹೋದರನನ್ನು ಆಯ್ಕೆ ಮಾಡುವುದಕ್ಕೆ ಕ್ಷೇತ್ರದ ಇತರರ ವಿರೋಧವಿದೆ. ಬಳ್ಳಾರಿ ಕಾಂಗ್ರೆಸ್‌ನಲ್ಲಿನ ಈ ಸಂಘರ್ಷದಿಂದ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯೇ ಕಾಂಗ್ರೆಸ್‌ಗೆ ತಲೆನೋವು ತರುವಂತಾಗಿದೆ. ಶಿವಮೊಗ್ಗದಲ್ಲಿ ಸ್ಪರ್ಧಿಸಲು ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್‌ ನಿರಾಕರಿಸಿದ್ದಾರೆ. ಸ್ಥಳೀಯ ಸುಂದರೇಶ್‌ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಟಿಕೆಟ್‌ ಖಾತರಿಪಡಿಸಿದರೆ ಅದೃಷ್ಟ ಪರೀಕ್ಷೆಗೆ ಇಳಿಯುವುದಾಗಿ ಪಟ್ಟು ಹಾಕಿದ್ದಾರೆ. ಈ ವಿಚಾರದಲ್ಲಿ ಸ್ಪಷ್ಟ ಭರವಸೆ ನೀಡಲು ಕಾಂಗ್ರೆಸ್‌ ನಾಯಕತ್ವ ತಯಾರಿಲ್ಲ. ಶಿವಮೊಗ್ಗದ ನಾಯಕರೊಂದಿಗೆ ಕೆಪಿಸಿಸಿ ಅಧ್ಯಕ್ಷರು ಸಭೆ ನಡೆಸಿದರೂ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಕಾಂಗ್ರೆಸ್‌ ಪ್ರಮುಖರು ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ನಡುವೆ ಮಂಗಳವಾರ ರಾತ್ರಿ ನಡೆದ ಮಾತುಕತೆಯಲ್ಲಿ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಕಲು ನಿರ್ಧರಿಸಲಾಗಿದೆ. ಈ ನಡುವೆಯೂ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್‌ನಿಂದ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ದೇವೇಗೌಡರು ಹೇಳಿಕೆ ನೀಡಿದ್ದಾರೆ. ”ವಿದೇಶ ಪ್ರವಾಸದಲ್ಲಿರುವ ಮಧು ವಾಪಸಾದ ಬಳಿಕ ಚರ್ಚಿಸಲಾಗುವುದು. ಸ್ಪರ್ಧೆಗೆ ಅವರು ನಿರಾಕರಿಸಿದರೆ ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗುವುದು,” ಎಂದೂ ಗೌಡರು ಹೇಳಿದ್ದಾರೆ. ಆದರೆ, ಮಧು ಬಂಗಾರಪ್ಪ ಅವರಿಗೇ ಈ ಚುನಾವಣೆಯಲ್ಲಿ ಕಣಕ್ಕಿಳಿಯುವುದು ಬೇಕಾಗಿಲ್ಲ. ಹಾಗಾಗಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ರಾಮನಗರದಲ್ಲಿ ಬಂಡಾಯ : ರಾಮನಗರದಲ್ಲಿ ಕಾಂಗ್ರೆಸ್‌ ಬೆಂಬಲದೊಂದಿಗೆ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಖಚಿತ. ಆದರೆ, ಕಾಂಗ್ರೆಸ್‌ನ ಅತೃಪ್ತರು ಬಂಡಾಯ ಹೂಡುವುದು ನಿಶ್ಚಿತವೆಂಬ ಸನ್ನಿವೇಶ ಸೃಷ್ಟಿಯಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಪರಾಭವಗೊಂಡಿದ್ದ ಇಕ್ಬಾಲ್‌ ಹುಸೇನ್‌ ಬಂಡಾಯಗಾರರಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ರಾಮನಗರ ಜೆಡಿಎಸ್‌ನ ಕೆಲವರು ಆಕ್ಷೇಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅತೃಪ್ತಿ ಶಮನಗೊಳಿಸಲು ದೇವೇಗೌಡ ಅವರು ತಮ್ಮ ನಿವಾಸದಲ್ಲಿ ರಾಮನಗರದ ಮುಖಂಡರೊಂದಿಗೆ ಬುಧವಾರ ರಾತ್ರಿ ಸಭೆ ನಡೆಸಿದರು.

ತಟಸ್ಥರಾಗಲಿರುವ ಅತೃಪ್ತರು: ಸಚಿವ ಸ್ಥಾನದ ಆಕಾಂಕ್ಷೆ ಹೊಂದಿರುವ ಕಾಂಗ್ರೆಸ್‌ ಶಾಸಕರು ಸದ್ಯಕ್ಕೆ ಮೌನವಾಗಿರಲು ನಿರ್ಧರಿಸಿದ್ದಾರೆ. ಸಂಪುಟ ವಿಸ್ತರಣೆ ಮುಂದೂಡಿಕೆ ಆಗಿದ್ದರಿಂದ ಉಪ ಚುನಾವಣೆ ಸಂದರ್ಭದಲ್ಲೂ ತಟಸ್ಥರಾಗುಳಿಯುವ ವರಸೆ ಪ್ರದರ್ಶಿಸಲಿದ್ದಾರೆ. ಈ ಅಂಶವೂ ಕಾಂಗ್ರೆಸ್‌ಗೆ ಸಮಸ್ಯೆ ತಂದೊಡ್ಡಲಿದೆ.

ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಮಸ್ಯೆ ಇಲ್ಲ. ವೆಣುಗೋಪಾಲ್ ಸೇರಿದಂತೆ ಎಲ್ಲ ನಾಯಕರೊಂದಿಗೆ ಚರ್ಚಿಸಿ ಆಯ್ಕೆ ಪ್ರಕ್ರಿಯೆ ಕೈಗೊಳ್ಲಲಾಗಿದೆ. – ಜಿ. ಪರಮೇಶ್ವರ, ಡಿಸಿಎಂ 

About the author

ಕನ್ನಡ ಟುಡೆ

Leave a Comment