ರಾಜಕೀಯ

ರಾಮನಗರದಲ್ಲಿ ಮಿನಿ ಆಪರೇಷನ್ ಕಮಲ: 25 ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆ

ರಾಮನಗರ: ರಾಮನಗರದ ರಾಜಕೀಯ ವಾತಾವರಣ ಕ್ಷಣಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ವಿಧಾನ ಪರಿಷತ್ ಸದಸ್ಯ, ರಾಮನಗರ ಕಾಂಗ್ರೆಸ್ ಮುಖಂಡ ಸಿಎಂ ಲಿಂಗಪ್ಪ ಪುತ್ರ ಚಂದ್ರಶೇಖರ್ 25 ಕಾಂಗ್ರೆಸ್ ಮುಖಂಡರೊಂದಿಗೆ  ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಭಿನ್ನಾಭಿಪ್ರಾಯ ಬಿಜೆಪಿಗೆ ವರವಾಗಿ ಪರಿಣಮಿಸಿದೆ,  ಬಿಜೆಪಿ ಸೇರ್ಪಡೆಯಾದವರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾಂಗ್ರೆಸ್ ಮುಖಂಡರಾಗಿದ್ದರು. ರಾಮನಗರ ಮಿನಿ ಆಪರೇಷನ್ ಕಮಲಕ್ಕೆ ಸಾಕ್ಷಿಯಾಗಿದೆ. ರಾಮನಗರದಲ್ಲಿ ಭದ್ರವಾಗಿ ಬೇರೂರಲು ಹವಣಿಸುತ್ತಿರುವ ಬಿಜೆಪಿ ಹಲವು ಅತೃಪ್ತ ಕಾಂಗ್ರೆಸ್ ನಾಯಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.
ನನ್ನ ಆತ್ಮತೃಪ್ತಿಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದೆ.  ಹಾಗೂ ಜೆಡಿಎಸ್ ಸೋಲಿಸುವುದೇ ನನ್ನ ಪ್ರಮುಖ ಉದ್ದೇಶ.  ನನಗೆ ಯಾವುದೇ ಕರ್ತವ್ಯ ವಹಿಸಿದರು ಶ್ರಮವಹಿಸಿ ಕೆಲಸ ಮಾಡಲು ನಾನು ಸಿದ್ದನಿದ್ದೇನೆ, ಯಾವುದೇ ಷರತ್ತಿಲ್ಲದೇ ನಾನು ಬಿಜೆಪಿ ಸೇರಿದ್ದೇನೆ. ಪಕ್ಷವನ್ನು ಕ್ಷೇತ್ರದಲ್ಲಿ ಬಲಗೊಳಿಸುವತ್ತ ಗಮನ ಹರಿಸುತ್ತೇನೆ ಚಂದ್ರಶೇಖರ್ ಲಿಂಗಪ್ಪ ಹೇಳಿದ್ದಾರೆ. ರಾಮನಗರ ಪಕ್ಷದ ಅಭ್ಯರ್ಥಿ ಎಂದು ಅವರು ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. 2 ದಿನಗಳಲ್ಲಿ ರಾಮನಗರದಲ್ಲಿ ಬೃಹತ್ ಸಮಾರಂಭ ನಡೆಸಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ಚಂದ್ರಶೇಖರ್ ಅವರು ಬಿಜೆಪಿ ಸೇರಿದ್ದರಿಂದ ರಾಮನಗರದಲ್ಲಿ ನಮಗೆ ದೊಡ್ಡ ಬೆಂಬಲ ಸಿಕ್ಕಿದಂತಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ,
ರಾಮನಗರ ಮತ್ತು ಮಂಡ್ಯದಲ್ಲಿ ಜೆಡಿಎಸ್ ವಿರುದ್ಧ ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ.  ಚಂದ್ರಶೇಖರ್ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಅವರಿಗೆ ರಾಮನಗರದಿಂದ ಟಿಕೆಟ್ ನೀಡಲಿದ್ದು ಅನಿತಾ ಕುಮಾರ ಸ್ವಾಮಿ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಆದರೆ ರಾಮನಗರದಿಂದ ಕಣಕ್ಕಿಳಿಯಲು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಭಾರೀ ಉತ್ಸುಕರಾಗಿದ್ದಾರೆ, ಇನ್ನೂ ರಾಮನಗರ ಕಾಂಗ್ರೆಸ್  ನಾಯಕ ಇಕ್ಬಾಲ್ ಅವರನ್ನು ಬಿಜೆಪಿಗೆ ಸೇರುವಂತೆ ಓಲೈಸಲು ಕಮಲ ನಾಯಕರು ಮುಂದಾಗಿದ್ದಾರೆ,. ಆದರೆ ಹುಸೇನ್ ರಾಮನಗರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೇ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಥಿಸುವುದಾಗಿ ಬೆದರಿಕೆ ಹಾಕಿದ್ದಾರೆ.

About the author

ಕನ್ನಡ ಟುಡೆ

Leave a Comment