ರಾಜಕೀಯ

ರಾಮನಗರ ಉಪ ಚುನಾವಣೆ: ಎಚ್​ಡಿಕೆ, ಡಿಕೆಶಿ ಏಟಿಗೆ ಯೋಗೀಶ್ವರ್​ ಕಂಗಾಲು

ರಾಮನಗರ: ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮಾಜಿ ಸಚಿವ ಸಿ.ಪಿ ಯೋಗೀಶ್ವರ್​ ಸದ್ಯ ಕ್ಷೇತ್ರ ತೊರೆದಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ಒಂದೆಡೆ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದ್ದರೆ, ಇತ್ತ ಪಕ್ಷದ ಹಿರಿಯ ನಾಯಕರ ಮಟ್ಟದಲ್ಲಿ ಯೋಗೀಶ್ವರ್​ ಇಮೇಜ್​ ಕಳೆದುಕೊಳ್ಳುವಂತಾಗಿದೆ.

ರಾಮನಗರ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್​ ಆಸಕ್ತರಾಗಿದ್ದರೂ, ಕಾಂಗ್ರೆಸ್​ನ ಪರಿಷತ್​ ಸದಸ್ಯ ಸಿಎಂ ಲಿಂಗಪ್ಪ ಅವರ ಪುತ್ರ ಎಲ್​.ಚಂದ್ರಶೇಖರ್​ ಅವರನ್ನು ಕಾಂಗ್ರೆಸ್​ನಿಂದ ಕರೆತಂದು ಅಭ್ಯರ್ಥಿ ಮಾಡುವಲ್ಲಿ ಯೋಗೀಶ್ವರ್​ ಅವರೇ ನಿರ್ಣಾಯಕ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಆದರೆ, ಅಭ್ಯರ್ಥಿ ಕೊನೆ ಕ್ಷಣದಲ್ಲಿ ಕಣದಿಂದಲೇ ನಿವೃತ್ತಿಯಾಗಿದ್ದು, ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಮುಖಭಂಗ ಉಂಟು ಮಾಡಿತ್ತು. ಚಂದ್ರಶೇಖರ್​ ನಿವೃತ್ತಿಯ ಹಿಂದೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ, ಸಚಿವ ಡಿ.ಕೆ ಶಿವಕುಮಾರ್​ ಅವರ ಕೈವಾಡವಿದೆ ಎಂಬುದು ಬಿಜೆಪಿಯ ಆರೋಪ.

ಈ ಬೆಳವಣಿಗೆ ನಂತರ ಚನ್ನಪಟ್ಟಣದ ಪರಾಜಿತ ಬಿಜೆಪಿ ಅಭ್ಯರ್ಥಿ ಯೋಗೀಶ್ವರ್​ ವಿರುದ್ಧ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್​ ಕೂಡ, ಸಿ.ಪಿ ಯೋಗೀಶ್ವರ್​ ಅವರ ನಡೆಯಿಂದಾಗಿ ಈ ಮುಜುಗರ ಉಂಟಾಯಿತು ಎಂದು ಹೇಳಿದ್ದರು. ಇದೆಲ್ಲದರ ಹಿನ್ನೆಲೆಯಲ್ಲಿ ಯೋಗೀಶ್ವರ್​ ಕಳೆದ ಹಲವು ದಿನಗಳಿಂದ ರಾಮನಗರದಿಂದ ನಾಪತ್ತೆಯಾಗಿದ್ದಾರೆ. ಯಾರ ಸಂಪರ್ಕಕ್ಕೂ ಸಿಗದ ಅವರು ಬೆಂಗಳೂರು ಸೇರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರಾಮನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡಿದ್ದಾರೆ. ಸಿ.ಪಿ ಯೋಗೀಶ್ವರ್​ ಅವರ ನಡೆಯಿಂದಾಗಿ ಪಕ್ಷ ಅನುಭವಿಸಿದ ರಾಷ್ಟ್ರ ಮಟ್ಟದ ಮುಜುಗರದಿಂದಾಗಿ ಪಕ್ಷದ ಮಟ್ಟಿಗೆ ಅವರು ಇಮೇಜ್​ ಕಳೆದುಕೊಂಡಿದ್ದಾರೆ. ನಾಯಕರು ಅವರ ವಿಚಾರದಲ್ಲಿ ಅಸಡ್ಡೆ ಧೋರಣೆ ಹೊಂದಿದ್ದಾರೆ ಎಂದು ಹೇಳಲಾಗಿದೆ.

About the author

ಕನ್ನಡ ಟುಡೆ

Leave a Comment