ರಾಜಕೀಯ

ರಾಮನಗರ ರಾಜಕೀಯ ಹೈಡ್ರಾಮ: ಪಕ್ಷೇತರ ಅಭ್ಯರ್ಥಿಗೆ ನಮ್ಮ ಬೆಂಬಲ ಎಂದ ಬಿಎಸ್ ವೈ

ಸಾಗರ: ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕುತಂತ್ರ ರಾಜಕಾರಣದಿಂದ ರಾಮನಗರ ಬಿಜೆಪಿ ಅಭ್ಯರ್ಥಿಯನ್ನು ಹೈಜಾಕ್ ಮಾಡಿದ್ದು, ಅವರ ಕುತಂತ್ರಕ್ಕೆ ನಾವು ಮಣಿಯುವುದಿಲ್ಲ, ನಾವು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರು ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿಯುವ ಮೂಲಕ ಬಿಜೆಪಿ ಮತ್ತು ಬಿಎಸ್ ಯಡಿಯೂರಪ್ಪ ಅವರಿಗೆ ತೀವ್ರ ಮುಜುಗರವನ್ನುಂಟು ಮಾಡಿದ್ದರು. ಚಂದ್ರಶೇಖರ್ ಅವರ ನಿರ್ಧಾರದಿಂದ ಪ್ರಸ್ತುತ ಬಿಜೆಪಿ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದು, ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇನ್ನು ಇದೇ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಕುತಂತ್ರದಿಂದಾಗಿ ಬಿಜೆಪಿ ಅಭ್ಯರ್ಥಿ ಹೈಜಾಕ್ ಆಗಿದ್ದಾರೆ. ಆದರೆ ಇದಕ್ಕೆ ಮುಂದೆ ಮತದಾರ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ‘ಹೀಗಾಗುವ ಅನುಮಾನ ಬಂದಿತ್ತು. ಆದರೆ ಆಗಲೇ ‘ಬಿ’ ಫಾರಂ ಕೊಟ್ಟಾಗಿದ್ದ ಕಾರಣ ಬದಲಿಸುವ ಸಾಧ್ಯತೆ ಇರಲಿಲ್ಲ. ಅಲ್ಲದೆ ಈ ಕಾರಣಕ್ಕಾಗಿಯೇ ನಾನು ಅಲ್ಲಿಗೆ ಪ್ರಚಾರಕ್ಕೆ ಹೋಗಿರಲಿಲ್ಲ. ಇಂತಹ ಕೀಳುಮಟ್ಟದ ರಾಜಕಾರಣಕ್ಕೆ ಬಿಜೆಪಿ ಯಾವತ್ತು ಹೆದರುವುದಿಲ್ಲ. ಆದರೆ ಚಂದ್ರಶೇಖರ್ ಅವರ ಈ ಕಾರ್ಯದಿಂದ ಕಾರ್ಯಕರ್ತರಿಗೆ ನೋವಾಗಿದೆ. ಪ್ರಸ್ತುತ ಈಗ ಅಲ್ಲಿ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಲು ತೀರ್ಮಾನ ಕೈಗೊಳ್ಳಲಾಗುತ್ತಿದೆ. ಈ ಕುರಿತು ಅಲ್ಲಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment