ರಾಷ್ಟ್ರ ಸುದ್ದಿ

ರಾಮಮಂದಿರ, ನೋಟು ನಿಷೇಧ: ವಿಶೇಷ ಸಂದರ್ಶನದಲ್ಲಿ ಮೋದಿ ಹೇಳಿದ್ದೇನು

ನವದೆಹಲಿ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗ ಸುಗ್ರೀವಾಜ್ಞೆ ಹೊರಡಿಸಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಸುಪ್ರೀಂಕೋರ್ಟ್ ತೀರ್ಪಿನ ನಂತರವೇ (ಸುಗ್ರೀವಾಜ್ಞೆ) ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಎಎನ್ಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ರಾಮಮಂದಿರ, ತ್ರಿವಳಿ ತಲಾಖ್ ಮಸೂದೆ, ಸರ್ಜಿಕಲ್ ಸ್ಟ್ರೈಕ್, ಲೋಕಸಭಾ ಚುನಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿರುವ ಪ್ರಧಾನಿ, ರಾಮಮಂದಿರ ವಿಚಾರದಲ್ಲಿ ನ್ಯಾಯಾಲಯದಲ್ಲಿ ಪ್ರಕ್ರಿಯೆ ವಿಳಂಬವಾಗಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಆರೋಪಿಸಿದರು.

ಸಂವಿಧಾನದ ಆಶಯದಂತೆಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುವುದು. ಸಂವಿಧಾನದ ಆಶಯದಂತೆ ಸಮಸ್ಯೆಗೆ ಪರಿಹಾರ ಕಂಡು ಹುಡುಕಿ ರಾಮಮಂದಿರ ಕಟ್ಟುವ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂದು ಹೇಳಿದರು.

ದೇಶದ ಜನರಿಗೆ ಸೂಕ್ಷ್ಮವಾಗಿ ನೋಟು ನಿಷೇಧದ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ನೋಟು ನಿಷೇಧದಿಂದ ಯಾವುದೇ ಸಮಸ್ಯೆ ತಲೆದೋರಿಲ್ಲ. ಲಿಂಗ ಸಮಾನತೆಗಾಗಿ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧ ವಿಧೇಯಕ ಜಾರಿಗೆ ತಂದಿದೆ ಎಂದರು.

ಆರ್ ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ ಎಂದ ಪ್ರಧಾನಿ ಮೋದಿ ತಮ್ಮ ಸಂದರ್ಶನದಲ್ಲಿ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. 2019ರ ಲೋಕಸಭಾ ಚುನಾವಣೆ ಜನತಾ ವರ್ಸಸ್ ಮಹಾಮೈತ್ರಿ ಕೂಟದ ನಡುವಿನ ಹೋರಾಟ ಎಂದು ಬಣ್ಣಿಸಿದರು.

ಬಿಜೆಪಿ ವಿಶ್ವದ ಅತೀ ದೊಡ್ಡ ರಾಜಕೀಯ ಸಂಘಟನೆ. ಬಿಜೆಪಿ ಬೆಳವಣಿಗೆಯನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ನಮ್ಮ ದೇಶದ ಜನತೆ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ದೇಶದಲ್ಲಿ ಆಗಿರುವ ಬದಲಾವಣೆ ನಿಮಗೆ ತಿಳಿಯುತ್ತದೆ. ಜಾತಿವಾದ, ಕುಟುಂಬ ಸಂಸ್ಕೃತಿ, ಭ್ರಷ್ಟಾಚಾರ ಕಾಂಗ್ರೆಸ್ ಜಾಯಮಾನವಾಗಿತ್ತು ಎಂದು ದೂರಿದರು.

 

About the author

ಕನ್ನಡ ಟುಡೆ

Leave a Comment