ರಾಜಕೀಯ

ರಾಮ ಮಂದಿರವನ್ನು ಭಾರತದಲ್ಲಿ ನಿರ್ಮಿಸದಿದ್ದರೆ, ಪಾಕಿಸ್ತಾನದಲ್ಲಿ ಕಟ್ಟಲು ಸಾಧ್ಯವೇ: ರೋಶನ್ ಬೇಗ್

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸಲ್ಮಾನರ ವಿರೋಧವಿಲ್ಲ, ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವುದರಿಂದ ಭಾರತೀಯ ಜನತಾ ಪಾರ್ಟಿ ವಿನಾಕಾರಣ ವಿವಾದ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ, ಶಾಸಕ ರೋಶನ್ ಬೇಗ್ ಆರೋಪಿಸಿದ್ದಾರೆ. ರಾಮಮಂದಿರ ಭಾರತದಲ್ಲಿ ನಿರ್ಮಾಣವಾಗದಿದ್ದರೆ, ಪಾಕಿಸ್ತಾನದಲ್ಲಿ ಕಟ್ಟಲು ಆಗುತ್ತದೆಯೇ ಎಂದು ಅವರು ಕೇಳಿದ್ದಾರೆ. ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಎಂದಿಗೂ ಅಡ್ಡಿಪಡಿಸಿಲ್ಲ ಮತ್ತು ಅಡ್ಡಿಪಡಿಸುವುದೂ ಇಲ್ಲ, ಭಾರತದಲ್ಲಿ ರಾಮಮಂದಿರ ನಿರ್ಮಿಸಲು ಸಾಧ್ಯವಾಗದಿದ್ದರೆ ಪಾಕಿಸ್ತಾನದಲ್ಲಿ ಕಟ್ಟಬೇಕೆ, ಅದು ಭಾರತದಲ್ಲಿಯೇ ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ  ನಡೆಸಿದ ಅವರು, ಭಾರತೀಯ ಜನತಾ ಪಾರ್ಟಿ ಹಿಂದೂ ಮತ್ತು ಮುಸ್ಲಿಂರ ಮಧ್ಯೆ ಬಿಕ್ಕಟ್ಟು ತಂದೊಡ್ಡುತ್ತಿದೆ.

ರಾಮಮಂದಿರ ವಿವಾದ ಕೋರ್ಟ್ ನಲ್ಲಿದೆ. ಬಿಜೆಪಿಯವರು ಸುಮ್ಮನೆ ಹಿಂದೂ ಮತ್ತು ಮುಸ್ಲಿಂರ ಮಧ್ಯೆ ಸಂಘರ್ಷ ತಂದೊಡ್ಡುತ್ತಿದ್ದಾರೆ ಎಂದರು. ಮುಂದಿನ ಕೆಲವೇ ತಿಂಗಳಲ್ಲಿ ಸಂಸತ್ತು ಚುನಾವಣೆ ಇರುವುದರಿಂದ ಬಿಜೆಪಿ ರಾಮಮಂದಿರ ನಿರ್ಮಾಣ ಕುರಿತು ವಿಧೇಯಕ ತರಲು ಯತ್ನಿಸುತ್ತಿದೆ. ದೇಶದ ಬಹುತೇಕ ಮಂದಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಕೆಲಸಗಳ ಬಗ್ಗೆ ಅಸಮಾಧಾನ ಇರುವುದರಿಂದ ಬಿಜೆಪಿಯವರು ರಾಮಮಂದಿರ ವಿಚಾರವನ್ನು ಸುಮ್ಮನೆ ಕೆಣಕುತ್ತಿದ್ದಾರೆ ಎಂದರು.ಬಿಜೆಪಿಯವರು ವಿಧೇಯಕ ತರಲು ಈಗ ಪ್ರಯತ್ನಿಸುತ್ತಿದ್ದಾರೆ. ಇದೇ ಕೆಲಸವನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಏಕೆ ಮಾಡಲಿಲ್ಲ. ತಮ್ಮ ಬಗ್ಗೆ ಜನತೆಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂಬುದು ಬಿಜೆಪಿಯವರಿಗೆ ಗೊತ್ತಾಗಿದೆ, ಹೀಗಾಗಿ ರಾಮಮಂದಿರ ಕುರಿತು ವಿಧೇಯಕ ತರಲು ಯತ್ನಿಸುತ್ತಿದ್ದಾರೆ ಎಂದು ರೋಶನ್ ಬೇಗ್ ಟೀಕಿಸಿದರು.

About the author

ಕನ್ನಡ ಟುಡೆ

Leave a Comment