ರಾಷ್ಟ್ರ ಸುದ್ದಿ

ರಾಮ ಮಂದಿರ : ಅಯೋಧ್ಯೆ ಧರ್ಮಸಭೆಯಲ್ಲಿ 2 ಲಕ್ಷಕ್ಕೂ ಅಧಿಕ ಜನರು ಭಾಗಿ; ವಿಎಚ್‌ಪಿ, ಆರ್‌ಎಸ್‌ಎಸ್‌

ಅಯೋಧ್ಯೆ / ವಾರಾಣಸಿ / ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಲವು ಹಿಂದೂ ಸಂಘಟನೆಗಳು ಪಣ ತೊಟ್ಟಿವೆ. ಹೀಗಾಗಿ ಶಿವನ ವೇಷದಲ್ಲಿ ತ್ರಿಶೂಲ ಹಿಡಿದುಕೊಂಡು ಅನೇಕ ಆರ್‌ಎಸ್‌ಎಸ್‌ ಕಾರ್ಯಕರ್ತರು ಉತ್ತರ ಪ್ರದೇಶದ ಅಯೋಧ್ಯೆಗೆ ದಾಂಗುಡಿ ಇಡುತ್ತಿದ್ದಾರೆ. ನವೆಂಬರ್ 25ರಂದು ನಡೆಯಲಿರುವ ವಿಎಚ್‌ಪಿ ಆಯೋಜಿತ ಧರ್ಮಸಭೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಜತೆಗೆ, ಈಗಾಗಲೇ ಹಲವು ವಿಎಚ್‌ಪಿ ಕಾರ್ಯಕರ್ತರು ಅಯೋಧ್ಯೆಯಲ್ಲಿದ್ದು, ಇನ್ನೂ ಹಲವರು ದೌಡಾಯಿಸುತ್ತಿದ್ದಾರೆ.

ಅನೇಕ ಸಾಧು ಸಂತರು ಸಹ ಶ್ರೀ ರಾಮನ ಜನ್ಮಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಭಾನುವಾರದ ಕಾರ್ಯಕ್ರಮಕ್ಕೆ 3 ಲಕ್ಷ ಆಹಾರದ ಪ್ಯಾಕೆಟ್ ಸಿದ್ಧಪಡಿಸುತ್ತಿದ್ದೇವೆಂದು ವಿಎಚ್‌ಪಿ ಆಯೋಜಕರು ಮಾಹಿತಿ ನೀಡಿದ್ದಾರೆ. ಧರ್ಮಸಭೆಯಲ್ಲಿ ಹಿಂದೂ ಬಲಪಂಥೀಯ ಕಾರ್ಯಕರ್ತರು, ಕರಸೇವಕರು ಹಾಗೂ ಸೈನಿಕರನ್ನು ಒಗ್ಗೂಡಿಸಲು ದೊಡ್ಡ ಪ್ರಯತ್ನ ನಡೆಯುತ್ತಿದೆ. ರಾಮ ಮಂದಿರ ನಿರ್ಮಾಣ ವಿಚಾರವಾಗಿ ಬಿಜೆಪಿ ಸರಕಾರ ನಿರ್ಧಾರ ಕೈಗೊಳ್ಳಲೆಂದು 2019ರ ಲೋಕಸಭೆ ಚುನಾವಣೆಗೂ ಹಲವು ತಿಂಗಳುಗಳ ಮುನ್ನ ದೊಡ್ಡ ಶಕ್ತಿ ಪ್ರದರ್ಶನ ಮಾಡಲು ವಿಎಚ್‌ಪಿ ಸಿದ್ಧತೆ ನಡೆಸಿದೆ.

ಸುಮಾರು 1322 ಬಸ್‌ಗಳು ಹಾಗೂ 1546 ನಾಲ್ಕು ಚಕ್ರದ ವಾಹನಗಳಲ್ಲಿ 80 ಸಾವಿರ ಕಾರ್ಯಕರ್ತರನ್ನು ಕರೆತರಲಾಗುತ್ತದೆ. ಅಲ್ಲದೆ, ಬೈಕ್‌ಗಳಲ್ಲಿ 14 ಸಾವಿರ ಕಾರ್ಯಕರ್ತರು ಹಾಗೂ ರೈಲುಗಳ ಮೂಲಕ 15 ಸಾವಿರ ಕಾರ್ಯಕರ್ತರು ಅಯೋಧ್ಯೆಗೆ ತಲುಪಲಿದ್ದಾರೆ. ಬಹುತೇಕರು ಉತ್ತರ ಪ್ರದೇಶದಿಂದಲೇ ಬರಲಿದ್ದಾರೆ ಎಂದು ವಾರಾಣಸಿಯ ಹಿರಿಯ ಆರ್‌ಎಸ್‌ಎಸ್‌ ಪ್ರಚಾರಕರು ತಿಳಿಸಿದ್ದಾರೆ. ಇನ್ನೊಂದೆಡೆ, ಶಿವಸೇನೆ ಸಹ ಪ್ರತ್ಯೇಕವಾಗಿ ಶಕ್ತಿ ಪ್ರದರ್ಶನ ನಡೆಸಲಿದ್ದು ಥಾಣೆಯಿಂದ ಐದು ವಿಶೇಷ ರೈಲುಗಳಲ್ಲಿ ಸುಮಾರು 3 ಸಾವಿರದಿಂದ 4 ಸಾವಿರ ಶಿವಸೈನಿಕರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಇನ್ನು, ಇಂದು ಹಾಗೂ ನಾಳೆ ನಡೆಯಲಿರುವ ಎರಡು ದಿನಗಳ ಕಾರ್ಯಕ್ರಮದಲ್ಲಿ ಪಕ್ಷದ 22 ಸಂಸದರು ಹಾಗೂ 62 ಎಂಎಲ್‌ಎಗಳು ಸಹ ಭಾಗಿಯಾಗುವ ಸಾಧ್ಯತೆ ಇದೆ.

ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಎರಡು ಪ್ರತ್ಯೇಕ ಖಾಸಗಿ ವಿಮಾನಗಳಲ್ಲಿ ಉದ್ಧವ್‌ ಠಾಕ್ರೆ ಹಾಗೂ ಅವರ ಪುತ್ರ ಫೈಜಾಬಾದ್‌ನಲ್ಲಿ ಲ್ಯಾಂಡ್‌ ಆಗಲಿದ್ದಾರೆ. ಅವರು ಅನೇಕ ಸ್ವಾಮೀಜಿಗಳನ್ನು ಭೇಟಿ ಮಾಡಲಿದ್ದು, ಸಂಜೆ ಸರಯೂ ನದಿಗೆ ಆರತಿ ಮಾಡಲಿದ್ದಾರೆ. ನಂತರ, ನಾಳೆ ರಾಮಜನ್ಮಭೂಮಿಗೆ ತೆರಳಲಿರುವ ಉದ್ಧವ್‌ ಠಾಕ್ರೆ, ಮಧ್ಯಾಹ್ನ 3 ಗಂಟೆ ವೇಳೆಗೆ ಮುಂಬೈನತ್ತ ವಾಪಸಾಗಲಿದ್ದಾರೆ. ವಿಎಚ್‌ಪಿಯ ಧರ್ಮಸಭೆ ನಾಳೆ ಮಧ್ಯಾಹ್ನ 2 ಗಂಟೆ ವೇಳೆಗೆ ಆರಂಭವಾಗಲಿದ್ದು, ಅಯೋಧ್ಯೆ ಸುತ್ತಮುತ್ತಲ 12 ಜಿಲ್ಲೆಗಳ ವಿಎಚ್‌ಪಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಒಟ್ಟಾರೆ, ಸಾಧು – ಸಂತರು ಸೇರಿ ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಹಿರಿಯ ಆರ್‌ಎಸ್‌ಎಸ್‌ ನಾಯಕರು ಸಹ ಹೆಚ್ಚು ಜನರನ್ನು ಸೇರಿಸಲು ಅನೇಕ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

About the author

ಕನ್ನಡ ಟುಡೆ

Leave a Comment