ರಾಜ್ಯ ಸುದ್ದಿ

ರಾಮ ಮಂದಿರ ನಿರ್ಮಿಸಿದರೆ ಮಾತ್ರ ಮತ್ತೆ ಮೋದಿ ಸರಕಾರ

ಮಂಗಳೂರು: ದೇಶದಲ್ಲಿ ಪ್ರಧಾನಿ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದು ಹಲವರ ಅಭಿಲಾಷೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಸ್ಥಾಪನೆಯಾದರೆ ಮಾತ್ರ ರಾಷ್ಟ್ರ ಮಂದಿರ ನಿರ್ಮಾಣ ಎಂಬುದು ಗಮನದಲ್ಲಿರಲಿ ಎಂದು ಬಜರಂಗದಳ ರಾಷ್ಟ್ರೀಯ ಸಂಯೋಜಕ ಸೋಹನ್‌ ಸಿಂಗ್‌ ಸೋಲಂಕಿ ಎಚ್ಚರಿಸಿದರು. ನಗರದ ನೆಹರು ಮೈದಾನದಲ್ಲಿ ಭಾನುವಾರ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ವಿಶ್ವ ಹಿಂದು ಪರಿಷತ್‌ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಡೆದ ಬೃಹತ್‌ ಜನಾಗ್ರಹ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ನಡೆಯಿತು. ದೇಶಾದ್ಯಂತ ಪ್ರಧಾನಿ ಅವರ ಅಚ್ಛೇ ದಿನ್‌ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಖಾತೆಗೆ 15 ಲಕ್ಷ ರೂ. ಬರುವಂತೆ, ಇನ್ನು ಕೆಲವರು ಒಳ್ಳೆಯ ರಸ್ತೆ, ಸೌಲಭ್ಯಗಳ ಕನಸು ಕಾಣುತ್ತಿದ್ದಾರೆ. ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗದೆ ದೇಶಕ್ಕೆ ಯಾವ ಅಚ್ಛೇ ದಿನ್‌ ಕೂಡಾ ಬರಲಾರದು ಎಂಬುದು ನಮ್ಮ ಒಕ್ಕೊರಲ ಬೇಡಿಕೆ. ರಾಮ ಮಂದಿರ ನಿರ್ಮಾಣದ ಜತೆಗೆ ಭಯೋತ್ಪಾದನೆಯನ್ನು ಬೆಂಬಲಿಸುವ ಬಾಬರನ ಮಾನಸಿಕತೆಗೆ ಅಂತ್ಯ ಹಾಡಬೇಕಿದೆ ಎಂದು ಅವರು ಹೇಳಿದರು.

ಶ್ರೀ ರಾಮ ಮಂದಿರ ನಿರ್ಮಾಣದ ಬಗ್ಗೆ ನಾವು ವಿವಿಧ ಆಯ್ಕೆ ಮುಂದಿಟ್ಟರೂ, ನೆಪಗಳನ್ನೊಡ್ಡಿ ಮುಂದೂಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ ಕೂಡಾ ವಿಚಾರಣೆ ಮುಂದೂಡಿಕೆ ಮಾಡಿರುವುದು ದೇಶದ 1.25 ಕೋಟಿ ಹಿಂದುಗಳಿಗೆ ಮಾಡಿರುವ ಅವಮಾನ ಎಂದು ನಾವು ಭಾವಿಸುತ್ತೇವೆ. ಇನ್ನು ಕಾಯುವ ವ್ಯವಧಾನ ನಮಗಿಲ್ಲ. ಸರ್ದಾರ್‌ ಪಟೇಲರು ಸೋಮನಾಥ ಮಂದಿರ ನಿರ್ಮಿಸಿದ ಮಾದರಿಯಲ್ಲೇ ಶ್ರೀರಾಮ ಮಂದಿರ ನಿರ್ಮಿಸಲಿದ್ದೇವೆ ಎಂದರು. ಈಗ ಕರ್ನಾಟಕದ ಮೂರು ಕಡೆ ಹಾಗೂ ಇನ್ನೆರಡು ತಿಂಗಳಲ್ಲಿ ದೇಶದ 500 ಸಂಸತ್‌ ಕ್ಷೇತ್ರಗಳಲ್ಲೂ ಇದೇ ಮಾದರಿಯ ಜನಾಗ್ರಹ ಸಮಾವೇಶಗಳು ನಡೆಯಲಿವೆ. ಇಡೀ ಭಾರತದ ಜನ ಶ್ರೀರಾಮ ಮಂದಿರದ ಪರವಾಗಿ ಎದ್ದು ನಿಂತಿದೆ. ಸುಪ್ರೀಂ ಕೋರ್ಟ್‌ನ ವಿಳಂಬ ನೀತಿಗೆ ಯಾರು ಹೊಣೆ ಎಂಬ ಬಗ್ಗೆ ಪ್ರಧಾನಮಂತ್ರಿಗಳಿಗೂ ರಾಜಸ್ತಾನದ ಸಭೆಯಲ್ಲಿ ಮನವರಿಕೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಬಾಬರ್‌, ಟಿಪ್ಪುವನ್ನು ಮಹಾನ್‌ ಎಂಬ ಬೋಧಿಸಲಾಗುತ್ತಿದೆ. ಶಿವಾಜಿ, ರಾಣಾ ಪ್ರತಾಪ್‌ ಬಿಟ್ಟರೆ ಬೇರಾರೂ ಮಹಾನ್‌ ಆಗಲು ಸಾಧ್ಯವಿಲ್ಲ. ರಾಜ್ಯಕ್ಕೆ ಏನೂ ಕೊಡುಗೆ ನೀಡದೆ, ಹಿಂದುಗಳ ಹತ್ಯೆ, ಮತಾಂತರ ಮಾಡಿರುವ ಟಿಪ್ಪು ಬದಲಿಗೆ ಕೃಷ್ಣ ದೇವರಾಯನ ಹುಟ್ಟುಹಬ್ಬ ಆಚರಿಸಿ. ದೇಶದ ಭವ್ಯ ಸಂಸ್ಕೃತಿ, ಪರಂಪರೆ ತಿಳಿಸಲು ರಾಮ ಮಂದಿರ ಆಂದೋಲನ ನಡೆಯುತ್ತಿದೆ ಎಂದು ಅವರು ಹೇಳಿದರು.

ದ್ರೋಹ ಬಗೆದಂತೆ: ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ದೇಶ ಮಹತ್ವದ ಘಟ್ಟ ಎದುರಿಸುತ್ತಿದ್ದು, ಇದರ ಸದುಪಯೋಗ ಮಾಡದಿದ್ದರೆ ನಮಗೆ ನಾವು ದ್ರೋಹ ಬಗೆದಂತೆ. ಸಮಗ್ರ ಹಿಂದೂಗಳ ಅಪೇಕ್ಷೆಯಂತೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದರು. ಇದು ಚುನಾವಣೆ ಬಂದಾಗ ನಡೆಯುವ ರಾಜಕೀಯ ತಂತ್ರಗಾರಿಕೆ ಅಲ್ಲ. ನಾವು ನಾಲ್ಕೂವರೆ ವರ್ಷ ಕಾದೆವು. ನಮ್ಮ ಸಹನೆಯ ಕಟ್ಟೆ ಒಡೆದಿದೆ. ಇದು ಸರಕಾರದ ಮೇಲೆ ಒತ್ತಡ ತರುವ ರಾಷ್ಟ್ರೀಯ ತಂತ್ರ. ಶ್ರೀರಾಮಚಂದ್ರ ಸೀತಾ ಮಾತೆಗಾಗಿ ಹೋರಾಟ ಮಾಡಿದಂತೆ, ನಮ್ಮದು ಭಾರತ ಮಾತೆಯ ಸ್ವಾಭಿಮಾನಕ್ಕಾಗಿ ನಡೆಯುವ ಹೋರಾಟ. ಈಗ ಸಂಸದರು ರಾಜೀನಾಮೆಗೂ, ಸಂತರು ತ್ಯಾಗಕ್ಕೂ ಸಜ್ಜಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ಲೋಕಸಭೆ, ರಾಜ್ಯಸಭೆಯಲ್ಲಿ ಬಹುಮತದಿಂದ ನಿರ್ಧಾರ ಕೈಗೊಳ್ಳಿ ಅಥವಾ ಕೋರ್ಟ್‌ನ ಹೊರಗೆ ಸಂಧಾನ ನಡೆಸಿ. ಆದರೆ, ಮಂದಿರ ನಿರ್ಮಾಣ ವಿಚಾರದಲ್ಲಿ ಯಾವುದೇ ರಾಜಿ ಮಾಡಬೇಡಿ ಎಂದು ಸರಕಾರಕ್ಕೆ ಸಲಹೆ ನೀಡಿದ ಸ್ವಾಮೀಜಿ, ಮಂದಿರ ನಿರ್ಮಾಣದಿಂದ ಸರಕಾರಕ್ಕೆ ಯಾವ ಅಪಾಯವೂ ಬರಲಾರದು. ಕಾಂಗ್ರೆಸಿಗರು ವಿರೋಧ ಮಾಡಿದರೆ ಚುನಾವಣೆಯಲ್ಲಿ ಪರಿಣಾಮ ಎದುರಿಸಲಿದ್ದಾರೆ. ಮುಸ್ಲಿಮರು ಮುಂದೆ ಬಂದು ಮಂದಿರ ನಿರ್ಮಾಣಕ್ಕೆ ಸಹಕರಿಸಿ ಹೊಸ ಯುಗಕ್ಕೆ ನಾಂದಿ ಹಾಡಬೇಕು. ಪ್ರಧಾನಿ ಮೋದಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ, ಫೆಬ್ರವರಿಯಲ್ಲಿ ನಡೆಯುವ ಕುಂಭ ಮೇಳದಲ್ಲಿ ನಾವು ನಮ್ಮ ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಕರಿಂಜ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ, ದೇರೆಬೈಲು ಕ್ಷೇತ್ರದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಕನ್ಯಾನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ, ಕಾವೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಜೋಗಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಗುಜರಾತ್‌ನ ಶ್ರೀ ರವಿಶರಣನಾಥೇಶ್ವರ ಸ್ವಾಮೀಜಿ ಭಾಗವಹಿಸಿದ್ದರು.
ಆರೆಸ್ಸೆಸ್‌ ವಿಭಾಗ ಕಾರ್ಯವಾಹ ನ.ಸೀತಾರಾಮ ಮಾತನಾಡಿದರು. ಹಿಂದು ಸಂಘಟನೆಗಳ ಪ್ರಮುಖರಾದ ಶಿವಾನಂದ ಮೆಂಡನ್‌, ಭುಜಂಗ ಕುಲಾಲ್‌, ಪ್ರವೀಣ್‌ ಕುತ್ತಾರ್‌, ಸುನಿಲ್‌ ಕೆ.ಆರ್‌., ಡಾ.ಕೃಷ್ಣ ಪ್ರಸನ್ನ, ಗೋಪಾಲ್‌ ಕುತ್ತಾರ್‌, ಸತೀಶ್‌ ಪುತ್ತೂರು, ಶ್ರೀಧರ ತೆಂಕಿಲ, ಮುರಳಿಕೃಷ್ಣ ಹಸಂತಡ್ಕ, ರಘು ಸಕಲೇಶಪುರ ಉಪಸ್ಥಿತರಿದ್ದರು.

ಮಂಡ್ಯ ಬಸ್‌ ದುರಂತದಲ್ಲಿ ಮೃತಪಟ್ಟವರು ಮತ್ತು ಮಾಜಿ ಸಚಿವ, ನಟ ಅಂಬರೀಶ್‌ ಅವರಿಗೆ ಕೃಷ್ಣಮೂರ್ತಿ ಸಂತಾಪ ಸೂಚಿಸಿದರು. ನಗರದ ಅಂಬೇಡ್ಕರ್‌ ವೃತ್ತದಿಂದ ನೆಹರು ಮೈದಾನ ತನಕ ಬೃಹತ್‌ ಶೋಭಾ ಯಾತ್ರೆ ನಡೆಯಿತು. ವಿಶ್ವ ಹಿಂದು ಪರಿಷತ್‌ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಸ್ವಾಗತಿಸಿದರು. ಪ್ರೊ.ಎಂ.ಬಿ.ಪುರಾಣಿಕ್‌ ಪ್ರಾಸ್ತಾವಿಕ ಮಾತನಾಡಿದರು. ಸಂಸತ್ತಿನಲ್ಲಿ ಶಾಸನ ರೂಪಿಸಂತೆ ಆಗ್ರಹಿಸಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮನವಿ ಅರ್ಪಿಸಿದರು. ದುರ್ಗಾವಾಹಿನಿಯ ವಿದ್ಯಾ ಮಲ್ಯ ವಂದಿಸಿದರು.

ಮೊದಲು ಅಯೋಧ್ಯೆ, ನಂತರ ಎಂಪಿ: ನಳಿನ್‌

ಮಂಗಳೂರು: 1992ರ ಕರಸೇವೆಯಲ್ಲಿ ಭಾಗವಹಿಸಿದ್ದರಿಂದಲೇ ನಾನು ಸಂಸದನಾಗಿದ್ದೇನೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಶ್ರೀ ರಾಮ ಮಂದಿರ ನಿರ್ಮಾಣ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿದ್ದು, ಜಿಲ್ಲೆಯ ಸಮಗ್ರ ಜನತೆಯ ಅಭಿಪ್ರಾಯವನ್ನು ಮಂಡಿಸುತ್ತೇನೆ. ನಾನೊಬ್ಬ ಹಿಂದು, ಮೊದಲು ಅಯೋಧ್ಯೆ, ನಂತರ ಸಂಸದ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

About the author

ಕನ್ನಡ ಟುಡೆ

Leave a Comment