ರಾಷ್ಟ್ರ ಸುದ್ದಿ

ರಾಹುಲ್ ಎಸ್.ಪಿ.ಜಿ ಕಾಯ್ದೆ ಉಲ್ಲಂಘಿಸಿದ್ದಾರೆ: ರಾಜನಾಥ್ ಸಿಂಗ್

ನವದೆಹಲಿ: ಗುಜರಾತ್‌ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ ನಡೆದ ಪ್ರಕರಣ ಇಂದು ಲೋಕಸಭೆ ಕಲಾಪದಲ್ಲಿ ಪ್ರಸ್ತಾಪವಾಯ್ತು.
ರಾಹುಲ್ ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ಗುಜರಾತ್‌ಗೆ ತೆರಳಿದ್ದ ವೇಳೆ ಬನಸ್ಕಾಂತಾದಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಕೊಲೆಗೆ ಯತ್ನಿಸಲಾಗಿದೆ. ಕೇಂದ್ರ ಸರ್ಕಾರ ರಾಹುಲ್‌ಗೆ ಸರಿಯಾದ ಭದ್ರತೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ದೂರಿದರು. (ರಾಹುಲ್‌ ಕಾರಿನ ಮೇಲೆ ಕಲ್ಲು ತೂರಾಟ ಪ್ರಕರಣ: ಬಿಜೆಪಿ ಯುವ ಮುಖಂಡ ಅರೆಸ್ಟ್‌!)
ಗುಜರಾತ್‌ನಲ್ಲಿ ಯಾವ ಉಗ್ರರು ಬಂದು ದಾಳಿ ಮಾಡಿದ್ದಾರೆ. ಜಮ್ಮು ಕಾಶ್ಮೀರದಿಂದ ಉಗ್ರರು ಬಂದಿದ್ದರೆ ಅಥವಾ ಬಿಜೆಪಿ ಕಾರ್ಯಕರ್ತರೇ ಉಗ್ರರಾಗಿ ಬಂದು ರಾಹುಲ್‌ ಪ್ರಾಣ ತೆಗೆಯಲು ಯತ್ನಿಸಿದರೇ ಎಂದು ಖರ್ಗೆ ಸದನದಲ್ಲಿ ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರ ಆರೋಪಕ್ಕೆ ಗೃಹ ಸಚಿವ ರಾಜನಾಥ್ ಸಿಂಗ್ ಉತ್ತರಿಸಿದರು. ಎಸ್‌ಪಿಜಿ ಹಾಗೂ ಅಲ್ಲಿನ ಪೊಲೀಸರ ಮಾತನ್ನು ರಾಹುಲ್ ಕೇಳಿಲ್ಲ. ಜೊತೆಗೆ ರಾಹುಲ್ ಭದ್ರತಾ ಸಲಹೆಗಳನ್ನು ಪಾಲಿಸಿಲ್ಲ. ಆದರೂ ಈ ಸಂಬಂಧ ಗುಜರಾತ್ ಸರ್ಕಾರ ತನಿಖೆ ಕೈಗೊಂಡಿದ್ದು, ಓರ್ವನನ್ನು ಬಂಧಿಸಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಗುಜರಾತ್ ರಾಜ್ಯ ಪೊಲೀಸರು ಬುಲೆಟ್ ಪ್ರೂಫ್ ವಾಹನ ಕೊಟ್ಟರೂ ರಾಹುಲ್ ಅದನ್ನು ಬಳಸಿಲ್ಲ. ರಾಹುಲ್ ಸುರಕ್ಷತೆಗೆ ಆ ರಾಜ್ಯದ ಪೊಲೀಸ್‌ ಇಲಾಖೆ ಹಲವಾರು ಕ್ರಮ ಕೈಗೊಂಡಿತ್ತು. ಪೊಲೀಸರನ್ನು ಭದ್ರತೆಗೆ ನಿಯೋಜಿಸಿತ್ತು. ಆದರೆ ರಾಹುಲ್ ಅವರು ಪೊಲೀಸರು, ಎಸ್‌ಪಿಜಿ ಅಧಿಕಾರಿಗಳ ಮಾತು ಕೇಳದ ರಾಹುಲ್ ತಮ್ಮ ಆಪ್ತ ಕಾರ್ಯದರ್ಶಿಯನ್ನು ಅನುಸರಿಸಿದ್ದಾರೆ. ರಾಹುಲ್ ಅವರು ಭದ್ರತೆ ವಿಷಯದಲ್ಲಿ ಕೆಲ ಸಲಹೆಗಳನ್ನು ಪಾಲಿಸಬೇಕು ಎಂದು ರಾಜನಾಥ್ ಹೇಳಿದ್ದಾರೆ
ಇದೇ ವೇಳೆ, ರಾಹುಲ್ ವಿದೇಶ ಪ್ರವಾಸಗಳಲ್ಲಿ ಎಸ್‌ಪಿಜಿ ಭದ್ರತೆ ಪಡೆಯದೇ ಇರುವ ವಿಷಯವನ್ನು ರಾಜನಾಥ್ ಪ್ರಶ್ನಿಸಿದರು. ಕಳೆದ 2 ವರ್ಷಗಳಲ್ಲಿ ರಾಹುಲ್ 6 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಆದ್ರೆ ಆಗೆಲ್ಲಾ ಎಸ್‌ಪಿಜಿ ಭದ್ರತೆ ತೆಗೆದುಕೊಂಡಿಲ್ಲ. ಆಗ ಅವರು ಎಲ್ಲಿ ಹೋಗಿದ್ದರು? ಎಸ್‌ಪಿಜಿ ಭದ್ರತೆ ಏಕೆ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿರುವ ರಾಜನಾಥ್, ಇದು ಕೇವಲ ಎಸ್‌ಪಿಜಿ ಕಾಯ್ದೆ ಉಲ್ಲಂಘನೆ ಮಾತ್ರವಲ್ಲ, ಭದ್ರತೆಯ ನಿರ್ಲಕ್ಷ್ಯ ಕೂಡ ಎಂದರು. ರಾಹುಲ್ ಎಲ್ಲಿಗೆ ಹೋಗುತ್ತಿದ್ದಾರೆಂಬ ವಿಷಯ ನಮಗೆ ತಿಳಿಯಬೇಕು. ಅವರು ಯಾಕೆ ಎಸ್‌ಪಿಜಿ ಭದ್ರತೆ ಪಡೆಯುತ್ತಿಲ್ಲ ಎಂದು ರಾಜನಾಥ್ ಪ್ರಶ್ನಿಸಿದರು.
ಎಸ್‌ಪಿಜಿ ಭದ್ರತೆ ಒದಗಿಸಿದ್ದರೂ ಅದನ್ನು ಬಳಸಿಕೊಳ್ಳದ ರಾಹುಲ್ ಏನನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಾಗಬೇಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕಾಂಗ್ರೆಸ್‌‌ಗೆ ತಿರುಗೇಟು ನೀಡಿದರು.

About the author

ಕನ್ನಡ ಟುಡೆ

Leave a Comment