ದೇಶ ವಿದೇಶ

ರೇನ್ ಕೋಟ್ ಹಾಕಿ ಸ್ನಾನ ಮಾಡೋದು ಗೊತ್ತು! ಪ್ರಧಾನಿ ಟಾಂಗ್ ಗೆ ಕೈ ಕಿಡಿ!

ನವದೆಹಲಿ: ದೇಶದಲ್ಲಿನ ನೋಟು ನಿಷೇಧ ಯಾವುದೇ ಪಕ್ಷದ ವಿರುದ್ಧದ ನಿರ್ಧಾರವಲ್ಲ. ನೋಟು ನಿಷೇಧ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವಾಗಿದೆ ವಿನಃ ರಾಜಕೀಯದ ವಿರುದ್ಧವಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ನೋಟು ನಿಷೇಧದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು. ಅಲ್ಲದೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ವಿರುದ್ಧ ಕಟು ವಾಗ್ದಾಳಿ ನಡೆಸಿದರು.

ಭಾರತದಲ್ಲಿನ ಭ್ರಷ್ಟಾಚಾರದಿಂದಾಗಿ ದೆಶದ ಬಡವರು ಮತ್ತು ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ರಾಜ್ಯಸಭೆಯಲ್ಲಿ ಮಾತನಾಡುತ್ತ ಹೇಳಿದರು.

ಮನಮೋಹನ್ ಸಿಂಗ್ ಅವರು ಓರ್ವ ಅಸಾಧಾರಣ ಮನುಷ್ಯ. ಅವರು ಪ್ರಧಾನಿಯಾಗಿದ್ದಾಗ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದರೂ ಅವರ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ಇದು ನಿಜಕ್ಕೂ ಅಚ್ಚರಿಯ ವಿಷಯ. ಅವರಿಗೆ ರೇನ್ ಕೋಟ್ ಹಾಕಿ ಸ್ನಾನ ಮಾಡೋದು ಗೊತ್ತು ಎಂದು ವ್ಯಂಗ್ಯವಾಡಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಸಂಸದರು  ರಾಜ್ಯಸಭೆ ಕಲಾಪದಿಂದ ಸಭಾತ್ಯಾಗ ನಡೆಸಿದರು.

ಕಾಂಗ್ರೆಸ್ ಗೆ ಟಾಂಗ್:
ಕಳೆದ 70ವರ್ಷಗಳ ಕಾಲ ದೇಶವನ್ನು ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದೆ. ನಾನು ಕೇವಲ 2.5 ವರ್ಷ ಆಡಳಿತ ನಡೆಸಿದ್ದೇನೆ. ಹಾಗಾದರೆ ದೇಶದ ಅಭಿವೃದ್ಧಿ ಆಗಿಲ್ಲ ಅಂದರೆ ಅದಕ್ಕೆ ನಾನೊಬ್ಬನೆ ಕಾರಣನಾ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ನೋಟು ನಿಷೇಧದ ಕ್ರಮ ಹೊಸದೇನಲ್ಲ, 1972ರಲ್ಲಿ ಜ್ಯೋತಿ ಬಸು ಕೂಡಾ ಲೋಕಸಭೆಯಲ್ಲಿ ನೋಟು ನಿಷೇಧದ ಬಗ್ಗೆ ಉಲ್ಲೇಖಿಸಿದ್ದರು. ಇಂದು ನಾವು ಏನೇ ಮಾಡಲು ಹೊರಟರು ಕೂಡಾ ಅದನ್ನು ಲೇವಡಿ ಮಾಡಲಾಗುತ್ತಿದೆ. ಸ್ವಚ್ಚತಾ ಆಂದೋಲನಾ, ನೋಟು ನಿಷೇಧದ ಬಗ್ಗೆ ವಿಪಕ್ಷಗಳು ಕೂಗಾಡುತ್ತಿವೆ ಎಂದು ಆರೋಪಿಸಿದರು.

About the author

ಕನ್ನಡ ಟುಡೆ

1 Comment

Leave a Comment