ರಾಜ್ಯ ಸುದ್ದಿ

ರೈತನ ಮಿತ್ರನಾರು, ವೈರಲ್ ಆಯ್ತು ಇಂಗ್ಲೀಷ್ ಮಾಧ್ಯಮ ಶಾಲೆಯ ಕನ್ನಡ ಪ್ರಶ್ನೆಪತ್ರಿಕೆ

ಬೆಂಗಳೂರು: ಪ್ರಾಥಮಿಕ ಅಥವಾ ಪ್ರೌಢ ಹಂತದ ಪಠ್ಯದಲ್ಲಿ ರೈತನ ಮಿತ್ರ ಎಂಬ ವಾಕ್ಯವನ್ನು ಕಲಿತಿರುವುದು ನೆನಪಿರಬಹುದು, ಹಾಗಾದರೆ ರೈತನ ಮಿತ್ರನಾರು? ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯೋ ಅಥವಾ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೋ ಅಥವಾ ಎರೆಹುಳವೋ? ಬೆಂಗಳೂರಿನ ರಾಜರಾಜೇಶ್ವರಿ ನಗರದ ಮೌಂಟ್‌ ಕಾರ್ಮೆಲ್‌ ಇಂಗ್ಲಿಷ್‌ ಹೈಸ್ಕೂಲ್‌ನ 2019ನೇ ಸಾಲಿನ 8ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ತೃತೀಯ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆ ಕೇಳಲಾಗಿದೆ. ನೀಡಿದ ಆಯ್ಕೆಗಳು ಇದೀಗ ರಾಜ್ಯಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಲು ಕಾರಣ ರೈತನ ಮಿತ್ರನಾಗಿ ಪ್ರಶ್ನೆಪತ್ರಿಕೆಯಲ್ಲಿ ಕೊಟ್ಟ ಆಯ್ಕೆಗಳು. ಸಿಎಂ ಕುಮಾರಸ್ವಾಮಿ, ಎರೆಹುಳ ಮತ್ತು ಮಾಜಿ ಸಿಎಂ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಹೆಸರುಗಳನ್ನು ಆಯ್ಕೆಗೆ ನೀಡಲಾಗಿತ್ತು. ಈ ರೀತಿ ಯಾಕೆ ಕೊಟ್ಟರು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಆಯಾ ಶಾಲೆಗಳಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ಅವಕಾಶ ಕಲ್ಪಿಸಿರುವುದು ಇಂತಹ ಗೊಂದಲಗಳಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ. ಎರೆಹುಳು ರೈತನ ಮಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ರಾಜಕಾರಣಿಗಳಾಗಿದ್ದು, ರೈತನ ಮಿತ್ರನಿಗೆ ಹೋಲಿಸಿ ಉತ್ತರ ಬರೆಯಲು ಕೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನು ಇದೇ ಪ್ರಶ್ನೆಪತ್ರಿಕೆಯಲ್ಲಿ ಕನ್ನಡದ ಆಸ್ತಿ ಎಂದು ಕರೆಯಲ್ಪಡುವ ಮಾಸ್ತಿಯವರು ಪ್ರೀತಿಸಿದ ಮತ್ತೊಂದು ಹೆಣ್ಣು ಯಾರು? ಎಂಬ ಪ್ರಶ್ನೆಗೆ ಆಯ್ಕೆಯಾಗಿ ಹೆಂಡತಿ, ತಂಗಿ ಹಾಗೂ ಅಮ್ಮ ಎಂಬ ಆಯ್ಕೆ ಉತ್ತರಗಳನ್ನು ನೀಡಲಾಗಿದೆ. ಇಲ್ಲಿ ಮಾಸ್ತಿಯವರು ಪ್ರೀತಿಸಿದ ಮತ್ತೊಂದು ಹೆಣ್ಣು ಯಾರು ಎಂಬ ಬದಲು ಮಹಿಳೆ ಎಂಬ ಗೌರವಯುತ ಪದಬಳಕೆ ಮಾಡಬಹುದಾಗಿತ್ತು ಎಂಬ ಆಕ್ಷೇಪ ಕೂಡ ಕೇಳಿಬರುತ್ತಿದೆ.

About the author

ಕನ್ನಡ ಟುಡೆ

Leave a Comment