ರಾಜ್ಯ ಸುದ್ದಿ

ರೈತರು ಆತ್ಮಹತ್ಯೆ ಮಾಡಿಕೊಂಡರೆ ಆಯಾ ಬ್ಯಾಂಕ್‌ಗಳೇ ಹೊಣೆ: ಸಚಿವ ಎಚ್‌.ಡಿ. ರೇವಣ್ಣ

ಹಾಸನ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ 2 ಲ.ರೂ.ವರೆಗಿನ ಸುಸ್ತಿ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರಕಾರ ಬದ್ಧವಾಗಿದೆ. ಆದರೂ ಸಾಲ ಮರು ಪಾವತಿಸುವಂತೆ ರೈತರಿಗೆ ಬ್ಯಾಂಕ್‌ಗಳು ನೋಟಿಸ್‌ ನೀಡಿ, ಅದರಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಸಂಬಂಧಿಸಿದ ಬ್ಯಾಂಕ್‌ ವ್ಯವಸ್ಥಾಪಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಎಚ್ಚರಿಕೆ ನೀಡಿದರು. ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ನೀಡಕೂಡದು. ರೈತರ 2 ಲ.ರೂ.ವರೆಗಿನ ಸಾಲ ಮನ್ನಾಮಾಡಿ, ಸರಕಾರ ಘೋಷಣೆ ಮಾಡಿದೆ. ಆದ್ದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳು ಕೆಲವು ಸಮಯ ಕಾಯಬೇಕು. ರೈತರೂ ಸಾಲ ಮರುಪಾವತಿ ಮಾಡಬಾರದು. ಬ್ಯಾಂಕುಗಳು ರೈತರಿಗೆ ಸಾಲ ಮರುಪಾವತಿಗಾಗಿ ಕಿರುಕುಳ ನೀಡಿದರೆ ರೈತರ ಸಾಲದ ಮನ್ನಾ ಮೊತ್ತವನ್ನು ಬ್ಯಾಂಕ್‌ಗಳ ಬದಲಿಗೆ ರೈತರ ಖಾತೆಗಳಿಗೆ ಪಾವತಿ ಮಾಡಬೇಕಾಗುತ್ತದೆ. ಆಗ ಬ್ಯಾಂಕ್‌ಗಳು ರೈತರಿಂದ ಹೇಗೆ ಸಾಲ ವಸೂಲಿ ಮಾಡಿಕೊಳ್ಳುತ್ತವೆ ಎಂದು ನೋಡುತ್ತೇವೆ ಎಂದು ಸವಾಲು ಹಾಕಿದರು.

ಬ್ಯಾಂಕ್‌ಗಳು ನೋಟಿಸ್‌ ನೀಡಿದರೂ ರೈತರು ಧೃತಿಗೆಡಬೇಕಾಗಿಲ್ಲ. ನೋಟಿಸ್‌ ನೀಡದಂತೆ ಎಲ್ಲ ಬ್ಯಾಂಕ್‌ ವ್ಯವಸ್ಥಾಪಕರುಗಳಿಗೂ ಸೂಚನೆ ನೀಡಲು ಶೀಘ್ರದಲ್ಲಿಯೇ ಲೀಡ್‌ ಬ್ಯಾಂಕ್‌ ನೇತೃತ್ವದಲ್ಲಿ ಎಲ್ಲ ಬ್ಯಾಂಕ್‌ಗಳ ವ್ಯವಸ್ಥಾಪಕರ ಸಭೆ ಕರೆಯಲಾಗುವುದು ಎಂದರು.

 

About the author

ಕನ್ನಡ ಟುಡೆ

Leave a Comment