ರಾಜ್ಯ ಸುದ್ದಿ

ರೈತರ ಆತ್ಮಹತ್ಯೆಗೆ ಸಿಎಂ ನೇರ ಹೊಣೆ: ಬಿ.ಎಸ್‌.ಯಡಿಯೂರಪ್ಪ

ಬೆಂಗಳೂರು: ಸಮ್ಮಿಶ್ರ ಸರಕಾರ ರಚನೆಯಾಗಿ ಆರು ತಿಂಗಳು ಕಳೆದರೂ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು ಇದಕ್ಕೆ ಮುಖ್ಯಮಂತ್ರಿಯೇ ನೇರ ಹೊಣೆ ಎಂದು ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ದೂರಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ” ರೈತರೇ ಮುಖ್ಯಮಂತ್ರಿ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪೊಳ್ಳು ಹಾಗೂ ಸುಳ್ಳು ಭರವಸೆಗಳನ್ನು ಕೊಡುವುದೇ ಈ ಸರಕಾರದ 6 ತಿಂಗಳ ಸಾಧನೆ. ಇದುವರೆಗೆ ಸರಕಾರ ಅಸ್ತಿತ್ವದಲ್ಲಿದ್ದುದೇ ಒಂದು ಸಾಧನೆ. ಈ ಅವಧಿಯಲ್ಲಿ ಸರಕಾರ ಏನಾದರೂ ಸಾಧನೆ ಮಾಡಿದ್ದರೆ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು,” ಎಂದು ಪ್ರಶ್ನಿಸಿದ್ದಾರೆ.

”ಮುಖ್ಯಮಂತ್ರಿಗಳೇ ಹೇಳಿದಂತೆ ಅವರ ಸರಕಾರ ಸಾಂದರ್ಭಿಕ ಶಿಶು, ಸಾಂದರ್ಭಿಕ ಕೂಸಿಗೆ ಯಾವುದೇ ಗೊತ್ತು ಗುರಿ ಇರುವುದಿಲ್ಲ. ಆಡಳಿತದ ಮೇಲೆ ಸಿಎಂಗೆ ಹಿಡಿತವೇ ಇಲ್ಲ. ಅವರು ಅರ್ಧ ಅವಧಿಯನ್ನು ದೇವಾಲಯ ಸುತ್ತಲು ಕಳೆದರೆ ಇನ್ನರ್ಧ ಅವಧಿಯಲ್ಲಿ ಐಷಾರಾಮಿ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಹೀಗಿದ್ದಾಗ ಅವರು ಜನರ ಸಮಸ್ಯೆ ಆಲಿಸುವ ಪ್ರಮೇಯವೇ ಇಲ್ಲ. ರಾಜ್ಯದ ಜನ ಅದರಲ್ಲೂ ಮಹಿಳೆಯರು ಮತ್ತು ರೈತರನ್ನು ಅವಮಾನಿಸುವ ಹೇಳಿಕೆ ನೀಡುವುದು, ದರ್ಪದ ಮಾತುಗಳನ್ನಾಡುವುದೇ ಸಿಎಂ ಸಾಧನೆಯಾಗಿದೆ. ಪದೇ ಪದೆ ರಾಜೀನಾಮೆ ಬಿಸಾಡುತ್ತೇನೆ ಎಂದು ಹೇಳಿ ಜನರಿಗೆ ಅವಮಾನ ಮಾಡುತ್ತಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದರೆ 5 ವರ್ಷ ಇರಲಿ, ಯಾರದೂ ಅಭ್ಯಂತರವಿಲ್ಲ ,” ಎಂದು ಹೇಳಿದರು.

”ಯಾವುದೇ ಸಮಸ್ಯೆ ಬಗೆಹರಿಸುವ ಮನಸ್ಸು ಈ ಸರಕಾರಕ್ಕೆ ಇಲ್ಲ, ಸಮಸ್ಯೆ ಬಗೆಹರಿಸಲಾಗದೇ ರೈತರು ಕಬ್ಬಿನ ವಾಹನಗಳನ್ನು ತಡೆದರೆ ಒದ್ದು ಒಳಗೆ ಹಾಕಿ ಹಿಂಡಲಗ ಜೈಲಿಗೆ ದಬ್ಬಿ ಎಂದು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಇದು ದುರಹಂಕಾರದ ಪರಮಾವಧಿಯಾಗಿದೆ. ಕಳೆದ ವರ್ಷದ ಕಬ್ಬಿನ ಬಾಬ್ತು ಪ್ರತಿ ಕ್ವಿಂಟಾಲ್‌ಗೆ 2500 ರೂ. ಪಾವತಿಸುವ ಬದಲು 2250 ರೂ. ಪಾವತಿಸಿ ಮೋಸ ಮಾಡಿದ್ದಾರೆ. ರಾಜ್ಯ ಸರಕಾರದ ಸಾಲ ಮನ್ನಾ ಯೋಜನೆ ಅನುಷ್ಠಾನಗೊಳ್ಳದೆ ರಾಜ್ಯದ ಎಲ್ಲಾ ಸಹಕಾರ ಸಂಸ್ಥೆಗಳು ಆರ್ಥಿಕವಾಗಿ ದಿವಾಳಿಯಾಗುತ್ತಿವೆ, ಕೆಲವೊಂದು ಸಂಸ್ಥೆಗಳು ಮುಚ್ಚುವ ಸ್ಥಿತಿಯಲ್ಲಿದ್ದು ಸರಕಾರದ ಸಾಧನೆಗೆ ಒಂದು ಉದಾಹರಣೆ,” ಎಂದು ಯಡಿಯೂರಪ್ಪ ಗುಡುಗಿದ್ದಾರೆ.

”ಈ ಸರಕಾರ ಎಷ್ಟು ದಿನ ಇರುತ್ತದೋ, ಹೋಗುತ್ತದೋ ಎಂಬುದು ಆ ಭಗವಂತನಿಗೆ ಮತ್ತು ಕಾಂಗ್ರೆಸ್‌ನವರಿಗೆ ಗೊತ್ತು. ಕಾಂಗ್ರೆಸ್‌ನವರ ಸಹನೆ ಮೆಚ್ಚುವಂತಹದ್ದು. ರಾಜ್ಯದ ಜನರಿಗೆ ಆಗುವ ಎಲ್ಲಾ ಅನ್ಯಾಯಗಳಿಗೆ ಮತ್ತು ಸಮಸ್ಯೆಗಳಿಗೆ ಕಾಂಗ್ರೆಸ್‌ ನೇರ ಹೊಣೆ ಹೊರಬೇಕು. ಮುಂದಿನ ದಿನಗಳಲ್ಲಿ ಜನ ಕಾಂಗ್ರೆಸ್‌ಗೆ ಮತ್ತು ಅದರ ಮಿತ್ರ ಪಕ್ಷಕ್ಕೆ ಪಾಠ ಕಲಿಸುವುದಂತೂ ಗ್ಯಾರಂಟಿ,” ಎಂದು ಹೇಳಿದ್ದಾರೆ. ಈ ಸರಕಾರ ಬಂದ ಮೇಲೆ ಎಸ್‌ಸಿ, ಎಸ್‌ಟಿ ಜನರಿಗೆ ಇರುವ ಯಾವುದೇ ಯೋಜನೆಗಳಿಗೆ ಅದರಲ್ಲೂ ಭೂಮಿ ಖರೀದಿ, ಸಮುದಾಯ, ಗಂಗಾ ಕಲ್ಯಾಣ, ಕೃಷಿ ಸಾಮಗ್ರಿ ವಿತರಣೆಗೆ ಯಾವುದೇ ಬಿಡಿಗಾಸು ಕೂಡು ಬಿಡುಗಡೆಯಾಗಿಲ್ಲ ,”ಎಂದು ಯಡಿಯೂರಪ್ಪ ಆರೋಪಿಸಿದರು.

About the author

ಕನ್ನಡ ಟುಡೆ

Leave a Comment