ರಾಜ್ಯ ಸುದ್ದಿ

ರೈತರ ಸಮಸ್ಯೆಗೆ ಸಾಲಮನ್ನಾ ಶಾಶ್ವತ ಪರಿಹಾರವಲ್ಲ: ಸಿಎಂ

ಬೆಂಗಳೂರು: ರೈತರ ಸಂಕಷ್ಟಗಳನ್ನು ಬಗೆಹರಿಸಲು ಸಾಲಮನ್ನಾ ಶಾಶ್ವತ ಪರಿಹಾರವಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಮೂರು ದಿನಗಳ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಆರ್ಥಿಕ ಪರಿಸ್ಥಿತಿಯನ್ನು ಸದೃಢ ಮಾಡಬೇಕು. ಹಾಗೆಂದು ಅದಕ್ಕೆ ಸಾಲಮನ್ನಾ ಸಂಪೂರ್ಣ ಪರಿಹಾರವಲ್ಲ. ರೈತರಿಗೆ ತಮ್ಮ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಬರಬೇಕು ಎಂದು ಅಭಿಪ್ರಾಯಪಟ್ಟರು.ರೈತರ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಲು ರಾಜ್ಯ ಸರ್ಕಾರ ಇಸ್ರೇಲ್ ಮಾದರಿಯ ತಂತ್ರಜ್ಞಾನವನ್ನು ಅಳವಡಿಸಲು ಸಿದ್ದತೆ ನಡೆಸುತ್ತಿದೆ. ಇಸ್ರೇಲ್ ಮಾದರಿ ತಂತ್ರಜ್ಞಾನದಲ್ಲಿ ಕಳೆದ 20 ವರ್ಷಗಳಲ್ಲಿ ಸುರಿದ ಮಳೆಯ ಆಧಾರದ ಮೇಲೆ ರೈತರ ಜಮೀನಿನಲ್ಲಿ ಯಾವ ರೀತಿಯ ಬೆಳೆ ಬೆಳೆದರೆ ಉತ್ತಮ  ಎಂದು ಪರಿಶೀಲಿಸಲಾಗುತ್ತದೆ. ರೈತರು ಜಮೀನಿನಲ್ಲಿ ಬೆಳೆದ ಬೆಳೆಗಳಿಂದ ಲಾಭ ಗಳಿಸುವಂತೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದ್ದು ರೈತರಿಂದ ನಮಗೆ ಸಹಕಾರ ಸಿಗಬೇಕಷ್ಟೆ ಎಂದರು.ಇಂದಿನ ಕೃಷಿ ಪದ್ಧತಿಯಲ್ಲಿ ರೈತರಿಗೆ ಅಗತ್ಯ ಬೆಂಬಲ ಬೆಲೆ ಸಿಗದಿರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ಅದಕ್ಕಾಗಿ ಕೃಷಿ ಪದ್ಧತಿಯಲ್ಲಿ ಸುಧಾರಣೆ ಮಾಡಬೇಕಾಗಿದೆ. ಹೆಚ್ಚೆಚ್ಚು ಧಾನ್ಯಗಳನ್ನು ಬೆಳೆಯಬೇಕು. ರೈತರು ಬೆಳೆದ ಸಿರಿಧಾನ್ಯಗಳು ಮಾರಾಟವಾಗಲು ಅದನ್ನು ಮಕ್ಕಳ ಮಧ್ಯಾಹ್ನದ ಬಿಸಿಯೂಟದಲ್ಲಿ ಮತ್ತು ಇಂದಿರಾ ಕ್ಯಾಂಟೀನ್ ನಲ್ಲಿ ಬಳಸಲು ಸರ್ಕಾರ ಮುಂದಾಗಲಿದೆ ಎಂದು ಹೇಳಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ರೈತರು ಹೆಚ್ಚೆಚ್ಚು ಧಾನ್ಯ ಬೆಳೆಯಲು ಸರ್ಕಾರ ಪ್ರೋತ್ಸಾಹ ನೀಡುತ್ತದೆ. ನಾವು ಈ ನಿಟ್ಟಿನಲ್ಲಿ ಟ್ರೆಂಡ್ ಸೃಷ್ಟಿಸಲು ಸಿದ್ಧವಾಗಿದ್ದು ಅದನ್ನು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಮಾದರಿ ಮಾಡಲು ಮುಂದಾಗುತ್ತೇವೆ. ವಿಶ್ವಸಂಸ್ಥೆ 2023ನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲು ಒಪ್ಪಿಕೊಂಡಿದೆ. ಧಾನ್ಯಗಳು ಭಾರತ ಮಾತ್ರವಲ್ಲದೆ ಇಡೀ ವಿಶ್ವದ ಭವಿಷ್ಯದ ಆಹಾರವಾಗಿದ್ದು ಅದು 21ನೇ ಶತಮಾನದ ಸ್ಮಾರ್ಟ್ ಫುಡ್ ಎಂದು ಕರೆಸಿಕೊಳ್ಳಲಿದೆ ಎಂದರು.

About the author

ಕನ್ನಡ ಟುಡೆ

Leave a Comment