ರಾಜ್ಯ ಸುದ್ದಿ

ರೈತರ ಸಾಲ ಮನ್ನಾ ಯೋಜನೆ : ಸಂಸತ್ತಿನಲ್ಲಿ ಕರ್ನಾಟಕ ಪರ ಹೋರಾಡಲು ಸಂಸದರಿಗೆ ಸಿಎಂ ಒತ್ತಾಯ

ಬೆಂಗಳೂರು: ರೈತರ ಸಾಲ ಮನ್ನಾ ಯೋಜನೆಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಹಣಕಾಸು ಮಾರುಕಟ್ಟೆಯಲ್ಲಿ ಬಾಂಡ್ ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮನವೊಲಿಸಲು ರಾಜ್ಯದ ಎಲ್ಲಾ ಸಂಸದರು ಮುಂದಾಗಬೇಕು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚು ಪರಿಹಾರ ಕೆಲಸಗಳಿಗೆ ಹಣ ಬಿಡುಗಡೆ ಮಾಡಲು ಹಾಗೂ ಮೇಕೆದಾಟು ಯೋಜನೆ ವಿರುದ್ಧ ತಮಿಳು ನಾಡಿನ ಸಂಸದರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುವುದನ್ನು ತಡೆಯಲು ರಾಜ್ಯದ ಸಂಸದರೆಲ್ಲಾ ಒಗ್ಗಟ್ಟಾಗಿ ಹೋರಾಡಬೇಕು ಎಂದು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.

ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭಕ್ಕೆ ಮುನ್ನ ಅವರು ನಿನ್ನೆ ಬೆಂಗಳೂರಿನಲ್ಲಿ ರಾಜ್ಯದ ಸಂಸದರೊಂದಿಗೆ ಮಾತುಕತೆ ನಡೆಸಿದರು. ರೈತರ ಸಾಲಮನ್ನಾ ಯೋಜನೆಗೆ ಹಣ ಕ್ರೋಢೀಕರಿಸಲು ಮಾರುಕಟ್ಟೆಯಲ್ಲಿ ಬಾಂಡ್ ಗಳ ಬಿಡುಗಡೆ ಸಂಬಂಧ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಇನ್ನೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಕೃಷಿ, ಕೈಗಾರಿಕೆ, ರಕ್ಷಣಾ ಇಲಾಖೆಗಳಿಗೆ ಸಂಬಂಧಪಟ್ಟ 15 ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದಿವೆ.

ರಕ್ಷಣಾ, ಹೆದ್ದಾರಿ ಖಾತೆ ಸಚಿವರುಗಳು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೂ, ರಾಜ್ಯದಲ್ಲಿ ಮೂಲಭೂತ ಸೌಕರ್ಯ ಯೋಜನೆಗಳು ವಿಳಂಬವಾಗುತ್ತಿದ್ದು ಸ್ಥಳೀಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಏನನ್ನೂ ಮಾಡಿಲ್ಲ ಎಂದು ಸಿಎಂ ಅಸಹಾಯಕತೆ ತೋಡಿಕೊಂಡರು. ಅಂತರಾಜ್ಯ ಜಲ ವಿವಾದದಲ್ಲಿ ರಾಜ್ಯದ ರಕ್ಷಣೆಗೆ ಸಂಸದರೆಲ್ಲರೂ ಒಟ್ಟಾಗಬೇಕಿದೆ.

ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಜಲ ಆಯೋಗದಿಂದ ವರದಿ ತಯಾರಿಸಲು ಸಿಕ್ಕಿರುವ ಅನುಮೋದನೆ ವಿರುದ್ಧ ತಮಿಳು ನಾಡು ಸಂಸದರು ಚಳಿಗಾಲ ಅಧಿವೇಶನದಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಇದರ ವಿರುದ್ಧ ನಮ್ಮ ರಾಜ್ಯದ ಸಂಸದರೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕೆಂದು ಸಿಎಂ ಮನವಿ ಮಾಡಿಕೊಂಡರು.ಅಲ್ಲದೆ ಬರಗಾಲಪೀಡಿತ ತಾಲ್ಲೂಕುಗಳಿಗೆ ಹೆಚ್ಚಿನ ಅನುದಾನ ತರಿಸಲು ಕ್ರಮ ಕೈಗೊಳ್ಳಬೇಕೆಂದು ಸಿಎಂ ಒತ್ತಾಯಿಸಿದರು.

About the author

ಕನ್ನಡ ಟುಡೆ

Leave a Comment