ರಾಜ್ಯ ಸುದ್ದಿ

ರೈಲು ಪ್ರಯಾಣಿಕರ ಜೀವ ಉಳಿಸಿದ ಬೆಳಗಾವಿ ಯುವಕರು

ಬೆಳಗಾವಿ:ಇಬ್ಬರು ಯುವಕರು ತಮ್ಮ ಜೀವದ ಹಂಗು ತೊರೆದು ರೈಲಿನಲ್ಲಿದ್ದ ಸಾವಿರಾರು ಪ್ರಯಾಣಿಕರನ್ನು ರಕ್ಷಿಸಿರುವ ಘಟನೆ ಬೆಳಗಾವಿಯ ಖಾನಾಪುರ್ ನಲ್ಲಿ ಶುಕ್ರವಾರ ನಡೆದಿದೆ.

ಘಟನೆ ವಿವರ: ಕೊಲ್ಲಾಪುರ-ಹೈದರಾಬಾದ್ ರೈಲು ಹುಬ್ಬಳ್ಳಿ ಕಡೆ ಆಗಮಿಸುತ್ತಿತ್ತು. ಈ ಸಂದರ್ಭದಲ್ಲಿ ಬೆಳಗಾವಿಯ ಖಾನಾಪುರ ರೈಲ್ವೆ ಹಳಿ ಮೇಲೆ ಏಕಾಏಕಿ ಮರ ಬಿದ್ದಿತ್ತು. ಏತನ್ಮಧ್ಯೆ ರಿಯಾಜ್ ಮತ್ತು ತೌಫಿಕ್ ಬೈಕ್ ನಲ್ಲಿ ಹೋಗುತ್ತಿದ್ದಾಗ, ರೈಲ್ವೆ ಹಳಿ ಮೇಲೆ ಮರ ಬಿದ್ದಿರುವುದನ್ನು ಗಮನಿಸಿ, ಅಪಾಯವನ್ನು ಗ್ರಹಿಸಿದ್ದರು.

ತಕ್ಷಣವೇ ಇಬ್ಬರು ಯುವಕರು ತಮ್ಮ ಅಂಗಿಯನ್ನು ಬಿಚ್ಚಿ ರೈಲ್ವೆ ಹಳಿ ಸಮೀಪದಿಂದ ಓಡುತ್ತಾ ಅಪಾಯವಿದೆ ಎಂಬುದನ್ನು ಸೂಚಿಸಿದ್ದರು. ಇದನ್ನು ಗಮನಿಸಿದ ರೈಲು ಚಾಲಕ ಬ್ರೇಕ್ ಹಾಕಿದ್ದರಿಂದ ಮರದ ಸಮೀಪ ರೈಲು ಬಂದು ನಿಲ್ಲುವ ಮೂಲಕ ಭಾರೀ ದುರಂತವೊಂದು ತಪ್ಪಿದಂತಾಗಿತ್ತು. ರೈಲಿನಲ್ಲಿ ಸಾವಿರಾರು ಮಂದಿ ಪ್ರಯಾಣಿಕರಿದ್ದಿದ್ದು, ಇಬ್ಬರು ಯುವಕರ ಸಮಯ ಪ್ರಜ್ಞೆಯಿಂದಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಿಯಜ್ ಮತ್ತು ತೌಫಿಕ್ ಕೆಲಸದ ಬಗ್ಗೆ ರೈಲ್ವೆ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

 

About the author

ಕನ್ನಡ ಟುಡೆ

Leave a Comment