ರಾಷ್ಟ್ರ ಸುದ್ದಿ

ರೈಲ್ವೆ ಹಗರಣ: ಲಾಲೂ ಪ್ರಸಾದ್ ತೇಜಸ್ವಿ ಯಾದವ್, ರಾಬ್ರಿ ದೇವಿಗೆ ದೆಹಲಿ ಕೋರ್ಟ್ ಜಾಮೀನು

ನವದೆಹಲಿ: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(ಐಆರ್ ಸಿಟಿಸಿ)ಯಲ್ಲಿ ಅಕ್ರಮ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಸೋಮವಾರ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್ ಗೆ ಜಾಮೀನು ಮಂಜೂರು ಮಾಡಿದೆ.
ವೈಯಕ್ತಿಕ ಬಾಂಡ್ 1 ಲಕ್ಷ ರೂಪಾಯಿ ಮತ್ತು ಅಷ್ಟೇ ಮೊತ್ತದ ಮುಚ್ಚಳಿಕೆ ಬರೆದು ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಜಾಮೀನು ಮಂಜೂರು ಮಾಡಿದ್ದಾರೆ. ಕಳೆದ ಜನವರಿ 19ರಂದು ನ್ಯಾಯಾಲಯ ನೀಡಿದ್ದ ಮಧ್ಯಂತರ ಜಾಮೀನನ್ನು ಇಂದಿನವರೆಗೆ ವಿಸ್ತರಿಸಲಾಗಿತ್ತು. ಲಾಲೂ ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ಐಆರ್ ಸಿಟಿಸಿಯ ಎರಡು ಹೊಟೇಲ್ ಗಳ ಕಾರ್ಯನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಕಂಪೆನಿಗೆ ನೀಡುವ ಸಂದರ್ಭದಲ್ಲಿ ಅಕ್ರಮವಾಗಿ ಹಣ ವರ್ಗಾಯಿಸಿದ ಕೇಸು ದಾಖಲಾಗಿತ್ತು. ಸಿಬಿಐ ದಾಖಲಿಸಿದ್ದ ಐಆರ್ ಸಿಟಿಸಿ ಹಗರಣ ಕೇಸಿನಲ್ಲಿ ಲಾಲೂ ಪ್ರಸಾದ್ ಯಾದವ್ ಅವರಿಗೆ ನ್ಯಾಯಾಲಯ ಇದಕ್ಕೂ ಮುನ್ನ ಜನವರಿ 19ರಂದು ಜಾಮೀನು ಮಂಜೂರು ಮಾಡಿತ್ತು.

About the author

ಕನ್ನಡ ಟುಡೆ

Leave a Comment