ಸುದ್ದಿ

ಲಿಂಗಾಯತರ ಕುರಿತ ಅವಹೇಳನಕಾರಿ ಹೇಳಿಕೆ: ಆರ್‌ಎಸ್‌ಎಸ್ ಮುಖಂಡ ಕ್ಷಮೆಯಾಚನೆ

ಬೆಂಗಳೂರು; ಲಿಂಗಾಯತ ಸಮುದಾಯ ಕುರಿತ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪ್ರಾಂತೀಯ ಪ್ರಚಾರಕ ಸು. ರಾಮಣ್ಣ ಕ್ಷಮೆಯಾಚಿಸಿದ್ದಾರೆ.

ಲಿಂಗಾಯತ ಸಮುದಾಯವನ್ನು ಅವಮಾನಿಸಿರುವ ಆರ್‌ಎಸ್‌ಎಸ್ ಮುಖಂಡ ಸು. ರಾಮಣ್ಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಆರ್‌ಎಸ್‌ಎಸ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮಂಗಳವಾರ ಸಂಜೆ ರಾಜ್ಯದ ಪ್ರಮುಖ ಲಿಂಗಾಯತ ಸಮುದಾಯದ ಮುಖಂಡರೂ ಆಗಿರುವ ಸಚಿವರಾದ ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ, ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಬಹಿರಂಗ ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಆರ್‌ಎಸ್‌ಎಸ್ ಮುಖಂಡರು ಸಮಾಲೋಚನೆ ನಡೆಸಿ ಚುನಾವಣೆ ಸಮೀಪಿಸುತ್ತಿರುವುದರಿಂದ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಈ ವೇಳೆ ಅವಹೇಳನಕಾರಿ ಹೇಳಿಕೆ ಗಂಭೀರ ಸ್ವರೂಪ ಪಡೆದುಕೊಳ್ಳಬಹುದು ಎಂಬ ಕಾರಣಕ್ಕಾಗಿ ಸ್ಪಷ್ಟೀಕರಣ ನೀಡುವಂತೆ ರಾಮಣ್ಣ ಅವರಿಗೆ ಸೂಚಿಸಿದರು ಎಂದು ತಿಳಿದು ಬಂದಿದೆ.

ಹಿಂದು ಸಮಾಜದ ಎಲ್ಲಾ ಜಾತಿ, ಮತ, ಪಂಥ ಹಾಗೂ ಸಂಪ್ರದಾಯಗಳ ಬಗ್ಗೆ ಸಮಾನ ಗೌರವವನ್ನು ಹೊಂದಿ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಮಾಜವನ್ನು ನೋಯಿಸುವ ಉದ್ದೇಶ ನಮ್ಮದಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಅವರು ಬುಧವಾರ  ರಾತ್ರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment