ರಾಜ್ಯ ಸುದ್ದಿ

ಲಿಂಗಾಯತ ಪ್ರತ್ಯೇಕ ಧರ್ಮ; ಪ್ರಧಾನಿ ನರೇಂದ್ರ ಮೋದಿ, ಶಾಗೆ ಮನವರಿಕೆ ಮಾಡ್ತೇವೆ: ಮಾತೆ ಮಹಾದೇವಿ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಎಂಬುದನ್ನು ಮನವರಿಕೆ ಮಾಡಿಸುತ್ತೇವೆ, ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನ್ನಾಡುತ್ತಿದ್ದ ಅವರು, ಸಿದ್ಧರಾಮಯ್ಯ ನೇತೃತ್ವದ ಹಿಂದಿನ ರಾಜ್ಯ ಸರಕಾರ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರಕಾರ ಈ ಕುರಿತು ಇನ್ನೂ ನಿರ್ಧರಿಸಿಲ್ಲ.ಕೇಂದ್ರ ಸರಕಾರಕ್ಕೆ ಲಿಂಗಾಯತ ಧರ್ಮದ ಬಗ್ಗೆ ಸರಿಯಾದ ಕಲ್ಪನೆ‌ ಇಲ್ಲ. ನಮ್ಮಲ್ಲಿರುವ ಕೆಲವರು ಅಮಿತ್ ಶಾ ಅವರಿಗೆ ತಪ್ಪು ಕಲ್ಪನೆ ‌ಮೂಡಿಸಿದ್ದಾರೆ. ಹೀಗಾಗಿ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ, ಎಂದರು. ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಯಡಿಯೂರಪ್ಪ ಹಾಗೂ ಸುರೇಶ್ ಅಂಗಡಿಯವರಿಗೆ ತಿಳಿ ಹೇಳಿದ್ದೇವೆ. ನಾವು ದೆಹಲಿಗೆ ಹೋಗೋ ಸಮಯದಲ್ಲಿ ಅವರನ್ನೂ ಸಹ ಕರೆಯುತ್ತೇವೆ, ಎಂದು ಅವರು ತಿಳಿಸಿದ್ದಾರೆ.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಹಾಗಾಗಿ ಪ್ರತ್ಯೇಕ ಧರ್ಮವಾಗಬೇಕು, ಅಲ್ಪಸಂಖ್ಯಾತ ಸ್ಥಾನ ಮಾನ ಸಿಗಬೇಕೆನ್ನುವ ಉದ್ದೇಶದಿಂದ ಹೋರಾಟ ಮಾಡುತ್ತಿದ್ದೇವೆ. ಹಿಂದಿನ ರಾಜ್ಯ ಸರಕಾರದ ಶಿಫಾರಸ್ಸನ್ನು ಕಡೆಗಣಿಸಿರುವ ಕೇಂದ್ರ ಸರಕಾರದ ಗಮನ ಸೆಳೆಯಲು ದೆಹಲಿಯಲ್ಲಿ ಮೂರುದಿನಗಳ ಸಮಾವೇಶ ಮಾಡಲು ನಿರ್ಧರಿಸಿದ್ದೇವೆ. ಡಿಸೆಂಬರ್ 10ರಂದು ದೆಹಲಿಯಲ್ಲಿ ಸಮಾವೇಶ ಆರಂಭವಾಗಲಿದೆ. ಮೂರು ದಿನಗಳ ಸಮಾವೇಶದಲ್ಲಿ ಕೊನೆಯ ದಿನ ಮೆರವಣಿಗೆ ಇಟ್ಟುಕೊಂಡಿದ್ದೇವೆ. ಕರ್ನಾಟಕ, ಆಂಧ್ರಪ್ರದೇಶ, ತಮೀಳುನಾಡು, ಗೋವಾದಿಂದ ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ, ಎಂದು ಅವರು ಹೇಳಿದ್ದಾರೆ. ಬಸವಣ್ಣನವರ ತಪೋಭೂಮಿ ಕೂಡಲಸಂಗಮವನ್ನು ನಮ್ಮ ಧರ್ಮ ಕ್ಷೇತ್ರ ಎಂದು 1989ರಲ್ಲಿ ಘೋಷಣೆ ಮಾಡಿದ್ದೇವೆ. ಬಸವ ಕಲ್ಯಾಣದಲ್ಲಿ ಇದೇ ತಿಂಗಳ 27 ರಿಂದ 29 ರವರೆಗೆ ಮೂರು ದಿನ ಕಲ್ಯಾಣ ಪರ್ವ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿದೆ, ಎಂದಿದ್ದಾರೆ ಮಾತೆ.

About the author

ಕನ್ನಡ ಟುಡೆ

Leave a Comment