ಸಿನಿ ಸಮಾಚಾರ

ಲೀಲಾ ಪ್ಯಾಲೇಸ್ ನಲ್ಲಿ ದೀಪಿಕಾ- ರಣ್ವೀರ್ ಅದ್ಧೂರಿ ಆರತಕ್ಷತೆ

ಬೆಂಗಳೂರು: ಇಟಲಿಯ ನಯನ ಮನೋಹರ ಲೇಕ್‍ಕೋಮೋ ದ್ವೀಪದಲ್ಲಿ ನ.14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸೂಪರ್ ಸ್ಟಾರ್‍ಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್‍ಸಿಂಗ್ ಅವರ ಅದ್ಧೂರಿ ಆರತಕ್ಷತೆ ಸಮಾರಂಭ ಉದ್ಯಾನನಗರಿಯ ಲೀಲಾ ಪ್ಯಾಲೇಸ್ ಹೋಟೆಲ್‍ನಲ್ಲಿ ನೆರವೇರಿತು.
ದೀಪಿಕಾ ಪಡುಕೋಣೆ ಫ್ಯಾಷನ್‌ ಡಿಸೈನರ್‌ ಸವ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದ ಆಫ್‌ವೈಟ್‌ ಅನಾರ್ಕಲಿ ಸೂಟ್‌, ಕುಂದನ್‌ ಚಾಂದ್‌ ಬಾಲಿ ಇಯರಿಂಗ್ಸ್‌, ಕೈಗೆ ಕೆಂಪು ಕಂಗನ್‌ ಮತ್ತು ಅತ್ಯಂತ ಸರಳವಾದ ಒಂದೆಳೆಯ ಮಂಗಳಸೂತ್ರ ಧರಿಸಿದ್ದರು. ಅವರ ಮುಖದಲ್ಲಿ ನವ ವಧುವಿನ ಕಳೆ ಎದ್ದು ಕಾಣುತ್ತಿತ್ತು. ದೀಪಿಕಾ ತಾಯಿ ಉಜ್ಜಲಾ ಅಂಗಡಿ ಗ್ಯಾಲೇರಿಯಾ ದಿಂದ ಮಗಳಿಗೆ ಸೀರೆ ಉಡುಗೊರೆ ನೀಡಿದ್ದರು. ಈ ಕಾರ್ಯಕ್ರಮದ ಪ್ರಯುಕ್ತ ಲೀಲಾ ಪ್ಯಾಲೆಸ್ ಸುತ್ತಮುತ್ತ ಭಾರೀ ಬಂದೋಬಸ್ತ್ ಮಾಡಲಾಗಿತ್ತು.ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ,  ನಂದನ್ ನಿಲೇಕಣಿ, ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ವಿನೋದ್ ಹಯಗ್ರೀವ, ಬ್ಯಾಡ್ಮಿಂಟನ್ ಆಟಗಾರ ಪುಲೇಲಾ ಗೋಪಿಚಂದ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಪಿ,ವಿ ಸಿಂಧು ಆರೋಗ್ಯ ಆಯುಕ್ತ  ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಆರತಕ್ಷತೆ ನಂತರ ಮುಂಬೈಗೆ ತೆರಳಲಿರುವ ತಾರಾ ದಂಪತಿ ವಾಣಿಜ್ಯ ನಗರಿ ಮುಂಬೈನಲ್ಲಿ ಸಂಜೆ ನಡೆಯಲಿರುವ ಮತ್ತೊಂದು ಭವ್ಯ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

About the author

ಕನ್ನಡ ಟುಡೆ

Leave a Comment