ಸಿನಿ ಸಮಾಚಾರ

ಮುಂಬೈ: ಲೈಂಗಿಕ ಕಿರುಕುಳದ ಬಗ್ಗೆ ತನುಶ್ರೀ ದತ್ತ ಮಾಡಿದ್ದ ಸರಣಿ ಆರೋಪಗಳ ಬಗ್ಗೆ ಕೊನೆಗೂ ಮಾತನಾಡಿದ ನಾನಾ ಪಾಟೇಕರ್

ಮುಂಬೈ: ಬಾಲಿವುಡ್​ ನಟಿ ತನುಶ್ರೀ ದತ್ತಾ ಅವರು ತಮ್ಮ ವಿರುದ್ಧ ಮಾಡುತ್ತಿದ್ದ ಸರಣಿ ಆರೋಪಗಳ ಕುರಿತು ಬಾಲಿವುಡ್​, ಮರಾಠಿ ನಟ ನಾನಾ ಪಾಟೇಕರ್​ ಇದೇ ಮೊದಲ ಬಾರಿಗೆ ಮಾಧ್ಯಮಗಳೆದುರು ಮಾತನಾಡಿದ್ದಾರೆ.

ಇಂದು ಮಧ್ಯಾಹ್ನ ದಿಢೀರ್​ ಸುದ್ದಿಗೋಷ್ಠಿ ನಡೆಸಿದ ಅವರು,” ಮಾಧ್ಯಮಗಳೆದುರು ಏನನ್ನೂ ಮಾತನಾಡದಂತೆ ನನ್ನ ವಕೀಲರು ಸಲಹೆ ನೀಡಿದ್ದಾರೆ. ನಾನು ಅವರ ಮಾತಿನಂತೇ ನಡೆದುಕೊಳ್ಳುತ್ತೇನೆ. ಹತ್ತು ವರ್ಷಗಳ ಹಿಂದೆ ನಾನು ಏನನ್ನು ಹೇಳಿದ್ದೆನೋ ಅದನ್ನೇ ಹೇಳಬಯಸುತ್ತೇನೆ. ಸತ್ಯ ಸಂಗತಿ ಏನು ಎಂಬುದು ಹತ್ತು ವರ್ಷಗಳ ಹಿಂದಿನದ್ದು. ಅದು ಇಂದಿಗೂ ಸತ್ಯವಾಗಿಯೇ ಉಳಿದಿದೆ. ಅದು ಬದಲಾಗುವುದಿಲ್ಲ,” ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ತನುಶ್ರೀ ದತ್ತಾ ಅವರು ನಾನಾ ಪಾಟೇಕರ್​ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ನಾನಾ ಮಾತನಾಡಿದ್ದು ಮಾತ್ರ ನಾಲ್ಕೇ ಮಾತು. “ಸತ್ಯವೆಂಬುದು ಎಂದಿಗೂ ಸತ್ಯವೇ” ಎಂಬುದಷ್ಟೇ ಅವರ ಮಾತಾಗಿತ್ತು.

ಹದಿನೈದು ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ‘ಆಶಿಕ್​ ಬನಾಯಾ’ ಖ್ಯಾತಿಯ ಬಾಲಿವುಡ್​ ನಟಿ ತನುಶ್ರೀ ದತ್ತ, ” 2009ರಲ್ಲಿ ತೆರೆಗೆ ಬಂದ ‘ಹಾರ್ನ್ ಒಕೆ ಪ್ಲೀಸ್’ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ನಾನಾ ಪಾಟೇಕರ್​ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು. ಚಿತ್ರೀಕರಣದ ವೇಳೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಆಗ ಸೆಟ್​ನಲ್ಲಿದ್ದ ಯಾರೂ ಕೂಡ ನೆರವಿಗೆ ಬಂದಿರಲಿಲ್ಲ. ನಾನಾ ಪಾಟೇಕರ್ ಮಹಿಳೆಯರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂಬುದು ಇಡೀ ಬಾಲಿವುಡ್​ಗೆ ಗೊತ್ತಿದೆ. ಅಷ್ಟೇ ಅಲ್ಲದೆ ಹಲವು ನಟಿಯರ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಆದರೆ ಎಲ್ಲೂ ಕೂಡ ಈ ಸುದ್ದಿಗಳು ಮಾಧ್ಯಮಗಳಲ್ಲಿ ಬರದಂತೆ ಅವರು ಕಾಪಾಡಿದ್ದಾರೆ” ಎಂದು ಆರೋಪಿಸಿದ್ದರು.

ತನುಶ್ರೀ ಅವರ ಆರೋಪದ ಹಿನ್ನೆಲೆಯಲ್ಲೇ ಬಾಲಿವುಡ್​ ಅಂಗಳದಲ್ಲಿ ಪರ ವಿರೋಧದ ಚರ್ಚೆಗಳು ಆರಂಭವಾಗಿದ್ದವು. ಈ ನಡುವೆ ತನುಶ್ರೀಗೆ ನೋಟಿಸ್​ ನೀಡಿದ್ದ ನಾನಾ ಪಾಟೇಕರ್​, ಮಾಧ್ಯಮಗಳೊಂದಿಗೆ ಮಾತನಾಡಿ “ಸತ್ಯ ಎಂದಿಗೂ ಸತ್ಯವೇ,” ಎಂದಿದ್ದರು. ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲೂ ಅದೇ ಮಾತುಗಳನ್ನಾಡಿದ್ದಾರೆ.

About the author

ಕನ್ನಡ ಟುಡೆ

Leave a Comment