ರಾಷ್ಟ್ರ ಸುದ್ದಿ

ಲೈಂಗಿಕ ಕಿರುಕುಳ ಆರೋಪ: ಎಸ್ಎಲ್ಎಸ್ ನಿಂದ ಇಬ್ಬರು ವಿದ್ಯಾರ್ಥಿನಿಯರು ಅಮಾನತು

ಹೈದರಾಬಾದ್: ಪ್ರಾಧ್ಯಾಪಕರೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಸಿಂಬಿಯಾಸಿಸ್ ಲಾ ಸ್ಕೂಲ್(ಎಸ್ಎಲ್ಎಸ್)ನಿಂದ ಮೌಖಿಕವಾಗಿ ಅಮಾನತುಗೊಳಿಸಲಾಗಿದೆ. ಟಿವಿ ಮಾಧ್ಯಮದಲ್ಲಿ ಸಂಸ್ಥೆಯ ಮಾನಹಾನಿ ಮಾಡಿದ ಮತ್ತು ಪ್ರಾಧ್ಯಾಪಕರ ಗೌರವಕ್ಕೆ ಧಕ್ಕೆತಂದ ಹಿನ್ನಲೆಯಲ್ಲಿ ಇಬ್ಬರು ಬಿಎ ಎಲ್ಎಲ್ ಬಿ ವಿದ್ಯಾರ್ಥಿನಿಯರಿಗೆ ಶುಕ್ರವಾರ ಸಂಜೆಯೊಳಗೆ ಹಾಸ್ಟೆಲ್ ತೊರೆಯುವಂತೆ ಸೂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಈ ಕುರಿತು ಯಾವುದೇ ಲಿಖಿತ ಆದೇಶ ನೀಡಿಲ್ಲ. ಫೇಸ್ ಬುಕ್ ಪೋಸ್ಟ್ ತೆಗೆದು ಹಾಕಬೇಕು ಮತ್ತು ಬೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಲಾ ಸ್ಕೂಲ್ ನಿಂದಲೇ ಅಮಾನತುಗೊಳಿಸುವುದಾಗಿ ಡೀನ್ ಶಶಿಕಲಾ ಗುರ್ಪೂರ್ ಅವರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಲೈಂಗಿಕ ಕಿರುಕುಳ ಆರೋಪ ಮಾಡಿದ ವಿದ್ಯಾರ್ಥಿನಿಯರಲ್ಲಿ ಒಬ್ಬರಾದ ಅಪೂರ್ವ ವೈ.ಕೆ. ಹೇಳಿದ್ದಾರೆ. ಅಲ್ಲದೆ ತಮ್ಮ ಫೇಸ್ ಬುಕ್ ಪೋಸ್ಟ್ ಅನ್ನು ಲೈಕ್ ಮಾಡಿದ ಇತರೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಅಮಾನತುಗೊಳಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ಕಾಲೇಜ್ ಆಡಳಿತ ಮಂಡಳಿ ಸಿಬ್ಬಂದಿ ನಿರಾಕರಿಸಿದ್ದಾರೆ.

About the author

ಕನ್ನಡ ಟುಡೆ

Leave a Comment