ರಾಜಕೀಯ

ಲೋಕಸಭಾ ಸಮರ: ಏ.18, 23 ರಂದು ಎರಡು ಹಂತಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ

ಬೆಂಗಳೂರು: ಏಪ್ರಿಲ್ 18 ಹಾಗೂ 23 ರಂದು ಎರಡು ಹಂತಗಳಲ್ಲಿ ರಾಜ್ಯದಲ್ಲಿನ  28 ಕ್ಷೇತ್ರಗಳಲ್ಲಿ  ಲೋಕಸಭಾ ಚುನಾವಣೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎರಡನೇ ಹಂತದಲ್ಲಿ ಮಾರ್ಚ್ 19 ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಮಾರ್ಚ್ 26 ನಾಮಪತ್ರ  ಸಲ್ಲಿಕೆಗೆ ಕಡೆಯ ದಿನವಾಗಿದೆ. ಮಾರ್ಚ್ 27 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾರ್ಚ್ 29 ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ ಎಂದು ಅವರು ಹೇಳಿದರು.

ಮಾರ್ಚ್ 28 ರಂದು ಮೂರನೇ ಹಂತದಲ್ಲಿ ಚುನಾವಣೆಯ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಏ. 4 ಕಡೆಯ ದಿನವಾಗಿದೆ.ಏ. 5 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏ. 8 ನಾಮಪತ್ರ ವಾಪಾಸ್ ಪಡೆಯಲು ಕಡೆಯ ದಿನವಾಗಿದೆ. ಮೇ 23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿನ ಒಟ್ಟು 28 ಕ್ಷೇತ್ರಗಳ ಪೈಕಿ, ಬಿಜಾಪುರ, ಗುಲ್ಬರ್ಗಾ, ಚಿತ್ರದುರ್ಗ, ಚಾಮರಾಜನಗರ , ಕೋಲಾರ ಪರಿಶಿಷ್ಟ ಜಾತಿಗೆ,  ರಾಯಚೂರು ಹಾಗೂ ಬಳ್ಳಾರಿ  ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ. ರಾಜ್ಯದಲ್ಲಿ  ಒಟ್ಟಾರೇ, 25494711 ಪುರುಷರು ಹಾಗೂ 24847292 ಮಹಿಳೆಯರು, 4718 ಇತರೆ ಮತದಾರರು ಸೇರಿದಂತೆ ಒಟ್ಟಾರೇ, 50346721 ಮತದಾರರಿದ್ದಾರೆ ಎಂದು ಅವರು ಹೇಳಿದರು. 

2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 54265 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಬಾರಿ 58186 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಶೇ. 7 ರಷ್ಟು ಏರಿಕೆಯಾಗಿದೆ  ಎಲ್ಲಾ ಮತಗಟ್ಟೆಗಳಲ್ಲಿ  ನೀರು, ಶೇಡ್, ಶೌಚಾಲಯ,  ಮತ್ತಿತರ ಕನಿಷ್ಠ ಸೌಕರ್ಯಗಳನ್ನು ಒದಗಿಸಲಾಗುವುದು, ಎಲ್ಲಾ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಹಾಗೂ ಇವಿಎಂಗಳನ್ನು ಬಳಸಲಾಗುವುದು ಎಂದು ಸಂಜೀವ್ ಕುಮಾರ್ ತಿಳಿಸಿದರು.

ಸೂಕ್ಷ್ಮ ಚಟುವಟಿಕೆಗಳ ಮೇಲೆ ನಿಗಾ ಇಡಲು  ವಿಡಿಯೋ , ಡಿಜಿಟಲ್ ಕ್ಯಾಮರಾ ಹಾಗೂ ಕ್ಯಾಮರಾ ತಂಡವನ್ನು ನಿಯೋಜಿಸಲಾಗುವುದು, ಮುಕ್ತ ಹಾಗೂ ನ್ಯಾಯ ಸಮ್ಮತ ರೀತಿಯಲ್ಲಿ ಚುನಾವಣೆಯಲ್ಲಿ ಸೂಕ್ತ  ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

About the author

ಕನ್ನಡ ಟುಡೆ

Leave a Comment