ರಾಜಕೀಯ

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ 2014ರ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿರುವ ಖಾಸಗಿ ಹೊಟೇಲ್ ನಲ್ಲಿ ಕಳೆದ ರಾತ್ರಿ ನಡೆದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ರಹಸ್ಯ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, ಕಳೆದ ಡಿಸೆಂಬರ್ ವರೆಗೆ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ ಬಿಜೆಪಿ ಪರವಾಗಿಲ್ಲದಿರಬಹುದು. ಆದರೆ ಇಂದು ಪರಿಸ್ಥಿತಿ ಬೇರೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಬಾರಿಯ ಲೋಕಸಭೆ ಚುನಾವಣೆಗಿಂತ ಈ ಬಾರಿ ಎನ್ ಡಿಎ ಮೈತ್ರಿಕೂಟ ಕನಿಷ್ಠ 60 ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ. ಪಶ್ಚಿಮ ಬಂಗಾಳ, ಒಡಿಶಾ, ಈಶಾನ್ಯ ಭಾರತ, ತಮಿಳು ನಾಡುಗಳಲ್ಲಿ ಜನರ ಒಲವು ನಮ್ಮ ಕಡೆಗಿದೆ. ಉತ್ತರ ಪ್ರದೇಶದಲ್ಲಿ ಎಸ್ ಪಿ-ಬಿಎಸ್ ಪಿ ಜೊತೆಗೆ ನಾಲ್ಕು ಕೋನದ ಸ್ಪರ್ಧೆ ಏರ್ಪಡಲಿದೆ. ಕಾಂಗ್ರೆಸ್ ಮತ್ತು ಶಿವಪಾಲ್ ಯಾದವ್ ಮತ್ತೊಂದು ಕಡೆಯಲ್ಲಿ ಸ್ಪರ್ಧೆಗಿರುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್, ಟಿಎಂಸಿ ಮತ್ತು ಕಮ್ಯೂನಿಸ್ಟ್ ಗಳ ನಡುವೆ ಕದನವೇರ್ಪಡಲಿದೆ ಎಂದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದ 22 ಕೋಟಿ ಜನರಿಗೆ ಉಪಯೋಗವಾಗಿದೆ. ನಾವು ಕೇವಲ ಭರವಸೆ ಮಾತ್ರ ನೀಡಿಲ್ಲ, ಅದನ್ನು ಈಡೇರಿಸಿದ್ದೇವೆ. ರಾಷ್ಟ್ರೀಯತೆ ನಮ್ಮ ಪಕ್ಷದ ಚುನಾವಣೆಯ ಮುಖ್ಯ ಕಾರ್ಯಕ್ರಮವಾಗಿದೆ. 2014ರಲ್ಲಿ ಪಕ್ಷದ ಸದಸ್ಯತ್ವ ಕೇವಲ 2.6 ಕೋಟಿಯಿತ್ತು. ಅದೀಗ 12 ಕೋಟಿಯಾಗಿದೆ ಎಂದರು. ಸಭೆಯಲ್ಲಿ ಬಿಜೆಪಿಯ 104 ಶಾಸಕರು, 18 ವಿಧಾನಪರಿಷತ್ ಸದಸ್ಯರು, 16 ಸಂಸದರು ಭಾಗವಹಿಸಿದ್ದರು.

About the author

ಕನ್ನಡ ಟುಡೆ

Leave a Comment