ರಾಜಕೀಯ

ಲೋಕಸಭೆ ಚುನಾವಣೆ: ತಣಿಯದ ಕೈ ಬಂಡಾಯ

ಬೆಂಗಳೂರು: ತುಮಕೂರು ಸೇರಿದಂತೆ ಜೆಡಿಎಸ್‌ಗೆ ಬಿಟ್ಟುಕೊಟ್ಟ ಕ್ಷೇತ್ರಗಳಲ್ಲಿ ಎದುರಾದ ಬಂಡಾಯ ಶಮನಕ್ಕೆ ಕಾಂಗ್ರೆಸ್‌ ವರಿಷ್ಠರು ಹರಸಾಹಸ ಪಡುತ್ತಿದ್ದಾರೆ. ಈ ಗೊಂದಲದ ಮಧ್ಯೆಯೇ ತುಮಕೂರಿನಿಂದ ಸ್ಪರ್ಧಿಸಲು ಮಾಜಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸನ್ನದ್ಧರಾಗಿದ್ದಾರೆ. ಆದರೆ, ಕಾಂಗ್ರೆಸ್‌ನ ಅತೃಪ್ತರ ಪ್ರತಿರೋಧ ಮುಂದುವರಿದಿದೆ.

ದೇವೇಗೌಡರು ತುಮಕೂರು ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಜತೆಗೆ ಕಾಂಗ್ರೆಸ್‌ನ ಹಾಲಿ ಸಂಸದ ಮುದ್ದಹನುಮೇಗೌಡ ಅವರೂ ಬಂಡಾಯಗಾರರಾಗಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಡಿಸಿಎಂ ಜಿ. ಪರಮೇಶ್ವರ್‌ ತುಮಕೂರಿನಲ್ಲಿ ಕಾಂಗ್ರೆಸ್‌ ಮುಖಂಡರೊಂದಿಗೆ ಭಾನುವಾರ ಸಭೆ ನಡೆಸಿದರು. ಆದರೆ ಈ ಸಭೆಯಲ್ಲೂ ಸ್ಥಳೀಯ ಮುಖಂಡರು ದೇವೇಗೌಡರ ಸ್ಪರ್ಧೆಯನ್ನು ಬಲವಾಗಿ ವಿರೋಧಿಸಿದ್ದಾರೆ. ‘ಹಾಲಿ ಸಂಸದ ಮುದ್ದಹನುಮೇಗೌಡರನ್ನೇ ಕಣಕ್ಕಿಳಿಸಬೇಕಿತ್ತು. ಜೆಡಿಎಸ್‌ಗೆ ಈ ಕ್ಷೇತ್ರ ನೀಡಿದ್ದು ಸರಿಯಲ್ಲ,” ಎಂದು ಆಕ್ಷೇಪಿಸಿದ್ದಾರೆ. ತುಮಕೂರು ಗ್ರಾಮಾಂತರದ ರಾಯಸಂದ್ರ ರವಿಕುಮಾರ್‌ ಈ ಸಭೆಯಿಂದಲೇ ಹೊರನಡೆದಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಸರತ್ತು ನಡೆಸಿರುವ ಜಿ. ಪರಮೇಶ್ವರ್‌ ಅವರು, ಮೈತ್ರಿಪಕ್ಷದ ಜಂಟಿ ಅಭ್ಯರ್ಥಿ ದೇವೇಗೌಡರ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸೂಚಿಸಿ ತೆರಳಿದ್ದಾರೆ. ಇನ್ನು ಜೆಡಿಎಸ್‌ ಸ್ಪರ್ಧಿಸುತ್ತಿರುವ ಹಾಸನ, ಮಂಡ್ಯದಲ್ಲೂ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ ತಣ್ಣಗಾಗಿಲ್ಲ. ಈ ನಡುವೆ, ದೇವೇಗೌಡರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಅವರು ತುಮಕೂರಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರ ಸಭೆ ನಡೆಸಿದ್ದಾರೆ.

ಕುಮಾರಸ್ವಾಮಿ ಗರಂ: ಕಾಂಗ್ರೆಸ್‌ನ ಬಂಡುಕೋರರನ್ನು ನಿಯಂತ್ರಿಸುವ ಕೆಲಸವಾಗಿಲ್ಲವೆಂದು ಸಿಎಂ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಬೇಸರ ತೋಡಿಕೊಂಡಿದ್ದಾರೆ. ಭಾನುವಾರ ತಮ್ಮನ್ನು ಭೇಟಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಸಚಿವ ಜಮೀರ್‌ ಅಹ್ಮದ್‌ ಬಳಿ ಸಿಎಂ ನೇರವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ”ಜೆಡಿಎಸ್‌ಗೆ ಮಹತ್ವದ್ದಾಗಿರುವ ಮಂಡ್ಯ, ಹಾಸನ, ತುಮಕೂರಿನಲ್ಲೇ ಬಹಳ ಸಮಸ್ಯೆಯಿದೆ. ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ನಡುವೆ ಹೊಂದಾಣಿಕೆಯೇ ಏರ್ಪಡುತ್ತಿಲ್ಲ. ಇದನ್ನು ಸರಿಪಡಿಸುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಸರಿಯಾಗಿ ಮಾಡಿಲ್ಲ. ಈ ವಿಚಾರವಾಗಿ ಹೈಕಮಾಂಡ್‌ ಜತೆಗೆ ಮಾತನಾಡಬಹುದು. ಆದರೆ, ಸ್ಥಳೀಯ ಮಟ್ಟದಲ್ಲೇ ಈ ಕಗ್ಗಂಟನ್ನು ಬಗೆಹರಿಸುವುದು ಸೂಕ್ತ,” ಎಂದು ಸಿಎಂ ಚುರುಕು ಮುಟ್ಟಿಸಿದರು ಎಂದು ತಿಳಿದು ಬಂದಿದೆ. ಕಾಂಗ್ರೆಸ್‌ ನಾಯಕರು ಸಿಎಂ ಅವರನ್ನು ಜೆಡಿಎಸ್‌ ವರಿಷ್ಠ ದೇವೇಗೌಡರ ನಿವಾಸದಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮೈತ್ರಿಯಲ್ಲಿನ ಗೊಂದಲದ ಬಗ್ಗೆ ಗೌಡರೂ ಅತೃಪ್ತಿ ವ್ಯಕ್ತಪಡಿಸಿದರು ಎನ್ನಲಾಗಿದೆ.

ದುರ್ಗದತ್ತ ಹೊರಟ ಸಿದ್ದರಾಮಯ್ಯ: ಮಂಡ್ಯದಿಂದ ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿರುವಂತೆ ಅನಿತಾ ಕುಮಾರಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು. ‘ನಿಖಿಲ್‌ ನಾಮಪತ್ರ ಸಲ್ಲಿಸುವಾಗ ಸಿದ್ದರಾಮಯ್ಯ ಜತೆಗಿದ್ದರೆ ಮಿತ್ರಪಕ್ಷಗಳ ನಡುವಿನ ಗೊಂದಲ ಇತ್ಯರ್ಥಗೊಳ್ಳುತ್ತದೆ. ಜತೆಗೆ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವೆ ಸಂಘರ್ಷವೇನೂ ಇಲ್ಲವೆಂಬ ಸಂದೇಶ ಹೋಗುತ್ತದೆ’ ಎನ್ನುವುದು ಜೆಡಿಎಸ್‌ ಯೋಚನೆಯಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ನಿಖಿಲ್‌ ನಾಮಪತ್ರ ಸಲ್ಲಿಕೆಯಿಂದ ದೂರವುಳಿಯಲಿದ್ದಾರೆ. ಪೂರ್ವ ನಿಯೋಜಿತ ಕಾರ್ಯಕ್ರಮದ ಪ್ರಕಾರ ಚಿತ್ರದುರ್ಗದಲ್ಲಿ ಸೋಮವಾರ ಪ್ರವಾಸ ಕೈಗೊಳ್ಳಲಿದ್ದಾರೆ.

ಮಂಡ್ಯದಲ್ಲಿ ಸುಮಲತಾಗೆ ಬಿಜೆಪಿ ಬೆಂಬಲಿಸಿರುವುದು ಸಂತೋಷದ ವಿಚಾರ. ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸಮಸ್ಯೆಯೇನೂ ಇಲ್ಲ. ಕೆಲ ಗೊಂದಲ ಬಗೆಹರಿಯುವ ವಿಶ್ವಾಸವಿದೆ. 
ಎಚ್‌.ಡಿ.ಕುಮಾರಸ್ವಾಮಿ, ಸಿಎಂ.

ಬೆಂಗಳೂರು ದಕ್ಷಿಣಕ್ಕೆ ಕಾಂಗ್ರೆಸ್‌ನಿಂದ ಹರಿಪ್ರಸಾದ್‌: ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಎಐಸಿಸಿಯಿಂದ ಭಾನುವಾರ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ದಿ. ಅನಂತ್‌ಕುಮಾರ್‌ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಘೋಷಣೆ ಕುರಿತು ಕುತೂಹಲ ಮೂಡಿಸಿದೆ

 

About the author

ಕನ್ನಡ ಟುಡೆ

Leave a Comment