ರಾಜಕೀಯ

ಲೋಕಸಭೆ ಚುನಾವಣೆ: ದೋಸ್ತಿ ಸರಕಾರ ಶೀಘ್ರ ಪತನ; ಪ್ರಧಾನಿ ಮೋದಿ

ಚಿತ್ರದುರ್ಗ/ಮೈಸೂರು: ಲೋಕಸಭೆ ಚುನಾವಣೆ ಕಣ ರಂಗೇರಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಎರಡು ಕಡೆಗಳಲ್ಲಿ ಚುನಾವಣ ರ್ಯಾಲಿ ನಡೆಸಿದ್ದು, ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು. ಕರ್ನಾಟಕದಲ್ಲಿ ಸೋತ ಎರಡು ಪಕ್ಷಗಳು ಕೇವಲ ಅಧಿಕಾರದ ಆಸೆಗಾಗಿ ಒಂದಾಗಿವೆ. ಈ ಸರಕಾರ ಶೀಘ್ರವೇ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮಂಗಳವಾರ ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ವಿಜಯ ಸಂಕಲ್ಪ ರ್ಯಾಲಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಜನರಿಂದ ತಿರಸ್ಕರಿಸಲ್ಪಟ್ಟು ಸೋತ ಎರಡು ಪಕ್ಷಗಳು ಕೇವಲ ಅಧಿಕಾರದ ಆಸೆಗಾಗಿ ಒಂದಾಗಿವೆ. ಈ ಎರಡೂ ಪಕ್ಷಗಳಿಗೆ ದೇಶದ ಕುರಿತು ಯಾವುದೇ ಚಿಂತನೆ ಇಲ್ಲ. ಜನರ ಸಮಸ್ಯೆ ಬಗ್ಗೆ ಚಿಂತೆ ಇಲ್ಲ. ಕೇವಲ ಕುರ್ಚಿ ಉಳಿಸಿಕೊಳ್ಳುವುದೇ ಎರಡೂ ಪಕ್ಷಗಳ ಕಾಯಕ ವಾಗಿದೆ. ಕರ್ನಾಟಕದಲ್ಲಿ ಸದ್ಯ ಇರುವುದು “ಮಹಾಮಿಲಾವಟ್‌’ ಸರಕಾರ. ಈ ಸರಕಾರವನ್ನು ನಿಯಂತ್ರಿಸುತ್ತಿರುವವರು ಬೇರೆಯವರು. ಈ ಸರಕಾರದ ರಿಮೋಟ್‌ ಕಂಟ್ರೋಲ್‌ ದಿಲ್ಲಿಯಲ್ಲಿದೆ. ಒಂದು ದಿನ ದೋಸ್ತಿ ಸರಕಾರದ ಒಬ್ಬ ಅಲ್ಲಿಗೆ ಓಡುತ್ತಾನೆ. ಮಾರನೇ ದಿನ ಮತ್ತೂಬ್ಬ ಮತ್ತೂಂದು ಕಡೆ ಓಡುತ್ತಾನೆ.

ಹೀಗೆ ಓಡುವವರನ್ನು ಹಿಡಿದಿಟ್ಟುಕೊಳ್ಳುವುದೇ ಎರಡೂ ಪಕ್ಷಗಳ ಮುಖಂಡರಿಗೆ ದೊಡ್ಡ ಕೆಲಸ ವಾಗಿದೆ. ಅಧಿಕಾರಕ್ಕಾಗಿ ಜನಹಿತ ಮರೆತಿರುವ ಈ ಎರಡೂ ಪಕ್ಷದವರು ಒಂದು ರಾತ್ರಿ ವಿರುದ್ಧ ದಿಕ್ಕಿನಲ್ಲಿ ಓಡಿ ಹೋಗಲಿದ್ದಾರೆ. ಇವರನ್ನು ಓಡಿಸುವ ಕಾಲ ಸನ್ನಿಹಿತವಾಗಿದೆ ಎಂದರು. ಕೇಂದ್ರದ ಬಿಜೆಪಿ ಸರಕಾರ ಹೇಳಿದ್ದನ್ನು ಮಾಡಿ ತೋರಿಸಿದೆ. ರೈತರ ನೆರವಿಗಾಗಿ ಧನಸಹಾಯ ನೀಡುವ ಯೋಜನೆ ಜಾರಿಗೆ ತಂದು 3 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಮೊದಲ ಕಂತಿನ ಹಣ ಹಾಕಲಾಗಿದೆ. 1.5 ಕೋಟಿ ರೈತರಿಗೆ ಎರಡನೇ ಕಂತೂ ಪಾವತಿಯಾಗಿದೆ. ಆದರೆ ದೋಸ್ತಿ ಸರಕಾರದ ಸಾಲಮನ್ನಾ ಯೋಜನೆ ಇನ್ನೂ ಸರಿಯಾಗಿ ಜಾರಿಯಾಗಲೇ ಇಲ್ಲ. ರೈತರ ಖಾತೆಗೆ ಹಣ ಬಂದಿಲ್ಲ. ಬದಲಾಗಿ ಬ್ಯಾಂಕ್‌ನಿಂದ ವಾರಂಟ್‌ ಜಾರಿಯಾಗುತ್ತಿದೆ. ಇದು ರಾಜ್ಯ ಸರಕಾರದ ಕಾರ್ಯವೈಖರಿಗೆ ಸಾಕ್ಷಿ ಎಂದು ಮೋದಿ ರಾಜ್ಯ ಸರಕಾರಕ್ಕೆ ತಿರುಗೇಟು ನೀಡಿದರು.

ಜಾತಿ ವಿಭಜನೆಯ ಷಡ್ಯಂತ್ರ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಜಾತಿ ವಿಘಟನೆಯಲ್ಲಿ ತೊಡಗಿವೆ. ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಸಮುದಾಯವನ್ನು ವಿಭಜಿಸಲು ಮುಂದಾದರು. ಕಾಂಗ್ರೆಸ್‌ ಜಾತಿ ಮುಂದಿಟ್ಟು ಹೇಗೆ ಆಟ ಆಡಬೇಕು ಎಂಬ ಆಲೋಚನೆಯಲ್ಲೇ ಇರುತ್ತದೆ. ಕಾಂಗ್ರೆಸ್‌, ಜೆಡಿಎಸ್‌ಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಚಿತ್ರದುರ್ಗದ ವೀರಮದಕರಿ ನಾಯಕ, ಒನಕೆ ಓಬವ್ವ ಶತ್ರುಗಳ ಆಕ್ರಮಣವನ್ನು ಎದುರಿಸಿ ನಾಡನ್ನು ಹೇಗೆ ರಕ್ಷಿಸಿದರೋ ಹಾಗೆಯೇ ಎಲ್ಲ ಚೌಕಿದಾರರು ಸೇರಿ ಕಾಂಗ್ರೆಸ್‌, ಮತ್ತು ಜೆಡಿಎಸ್‌ನಿಂದ ದೇಶ, ರಾಜ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು. ಕಾಂಗ್ರೆಸ್‌ನಿಂದ ಪೀಡನೆಗೊಳಗಾದ ದೇಶಕ್ಕೆ ಈಗ ನ್ಯಾಯ ಸಿಗಬೇಕಿದೆ. ನ್ಯಾಯ ಕೊಡಿಸಲು ದೇಶದ ಚೌಕಿದಾರ ಬದ್ಧನಾಗಿದ್ದು, ನ್ಯಾಶನಲ್‌ ಹೆರಾಲ್ಡ್‌, ಕಾಮನ್‌ವೆಲ್ತ್‌ ಹಗರಣ, 2ಜಿ  ಮೊದಲಾದ ಹಗರಣ ಮಾಡಿದವರಿಗೆ, ಸಿಖ್‌ ದಂಗೆ ಮಾಡಿಸಿದವರಿಗೆ ಶಿಕ್ಷೆ ಕೊಡಿಸದೆ ಬಿಡುವುದಿಲ್ಲ. ಕುಟುಂಬಕ್ಕಾಗಿ ಇಷ್ಟೆಲ್ಲ ಮಾಡಿದವರಿಗೆ ತಕ್ಕ ಶಾಸ್ತಿ ಆಗಲೇಬೇಕಿದೆ. ಇವರಿಗಾಗಿ ಜೈಲಿನ ಬಾಗಿಲು ಈಗಾಗಲೇ ತೆರೆದಿದೆ ಎಂದರು.

 

About the author

ಕನ್ನಡ ಟುಡೆ

Leave a Comment