ರಾಜ್ಯ ಸುದ್ದಿ

ಲೋಕಸಭೆ ಚುನಾವಣೆ 2019: ಕಣದಲ್ಲಿ ಏನೇನು ಏ.2ರ ಮುಖ್ಯಾಂಶಗಳು

ಬೆಂಗಳೂರು: ರಾಜ್ಯದಲ್ಲಿ ಲೋಕಸಮರದ ಮೊದಲ ಹಂತದ ಮತದಾನಕ್ಕೆ ಇನ್ನು 16 ದಿನಗಳು ಉಳಿದಿವೆ. ಪ್ರಚಾರ ಕಣದಲ್ಲಿ ಏನೇನು ನಡೆಯುತ್ತಿವೆ, ಮುಖ್ಯಾಂಶಗಳು ಇಲ್ಲಿವೆ ನೋಡಿ. ಮಂಡ್ಯ ಕ್ಷೇತ್ರದಲ್ಲಿ ದೋಸ್ತಿ ಸರಕಾರದಿಂದ ಅಧಿಕಾರ ದುರ್ಬಳಕೆಯ ಆರೋಪ ಕೇಳಿಬಂದ ಬೆನ್ನಿಗೇ ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು (ಸಿಇಒ) ವರ್ಗಾಯಿಸಲಾಗಿದೆ. ಹಾಗೆಯೇ ಮಂಡ್ಯದ 3 ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು (ಇಒ) ಸೇರಿ ಒಟ್ಟಾರೆ ರಾಜ್ಯಾದ್ಯಂತ 75 ಇಒಗಳನ್ನು ವರ್ಗಾಯಿಸಲಾಗಿದೆ. ಮುಖ್ಯವಾಗಿ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್‌ ಕಣಕ್ಕಿಳಿದಿರುವ ಕಾರಣ ಹೈವೋಲ್ಟೇಜ್‌ ಹಣಾಹಣಿಯ ಕಣವಾಗಿರುವ ಮಂಡ್ಯದಲ್ಲಿ ಮೇಜರ್‌ ಸರ್ಜರಿ ನಡೆದಿದೆ. ಈ ನಡುವೆ, ಪ್ರಮುಖ ಪಕ್ಷಗಳ ಬೆಂಬಲಿಗ ಉದ್ಯಮಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಶೇಷ ನಿಗಾ ಇರಿಸಿದ್ದಾರೆ.

ಅಕ್ರಮ ಹಣ ವಶ: ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಜೆಡಿಎಸ್‌ ಕಾರ್ಯಕರ್ತ, ವ್ಯಾಪಾರಿ ರವಿ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು 5 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಈ ನಡುವೆ ರಾಜ್ಯಾದ್ಯಂತ ಹಲವೆಡೆ ಚೆಕ್‌ಪೋಸ್ಟ್‌ಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂ. ವಶಪಡಿಸಿಕೊಳ್ಳಲಾಗಿದೆ.

ಉಚಿತ ಪ್ರಯಾಣ ಸೇವೆ ವಿರುದ್ಧ ಕ್ರಮ: ಬೆಂಗಳೂರು: ಮತದಾರರನ್ನು ಚುನಾವಣೆ ಹಿನ್ನೆಲೆಯಲ್ಲಿ ಅವರ ಊರುಗಳಿಗೆ ಉಚಿತವಾಗಿ ಕರೆದೊಯ್ಯುವ ಖಾಸಗಿ ಬಸ್‌ ಮಾಲೀಕರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರು: ಮೊದಲ ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮತ್ತು ಬಿಜೆಪಿ ಬಿರುಸಿನ ಪ್ರಚಾರಕ್ಕೆ ಇಳಿಯಲು ಮುಂದಾಗಿದ್ದು, ನಾಯಕರ ಬಹಿರಂಗ ಸಭೆಗೆ ದಿನಾಂಕಗಳನ್ನು ನಿಗದಿಪಡಿಸಿದೆ.

ಸಾರ್ವತ್ರಿಕ ಚುನಾವಣೆ ಬಂತೆಂದರೆ ಪಕ್ಷಾಂತರಕ್ಕೆ ಸುಗ್ಗಿಕಾಲ. ಟಿಕೆಟ್‌ ಅಸಮಾಧಾನ, ಸೋಲು-ಗೆಲುವಿನ ಲೆಕ್ಕಾಚಾರ ಹೀಗೆ ಹಲವು ಕಾರಣಗಳಿಂದ ರಾಜಕೀಯ ನಾಯಕರು ಪಕ್ಷದಿಂದ ಪಕ್ಷಕ್ಕೆ ಹಾರುವುದು ಸಾಮಾನ್ಯ. 2019ರ ಲೋಕಸಭಾ ಸಮರವೂ ಇದರಿಂದ ಹೊರತಾಗಿಲ್ಲ. ಕಳೆದ ಮೂರು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿದಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿಯ ಕಾಂಗ್ರೆಸ್‌ ಶಾಸಕ ಉಮೇಶ್‌ ಜಾಧವ್‌ ಅವರ ಬಿಜೆಪಿ ಸೇರ್ಪಡೆ ವಿಚಾರ ರಾಜ್ಯದಲ್ಲಿ ಸದ್ದು ಮಾಡಿತು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರದಲ್ಲಿ ಸಂಪುಟ ದರ್ಜೆ ನಿರಾಕರಣೆ ಬೆನ್ನಲ್ಲೇ ಬಂಡೆದ್ದ ಜಾಧವ್‌ ರಾಜೀನಾಮೆ ಕೊಟ್ಟು ಬಿಜೆಪಿ ತೆಕ್ಕೆಗೆ ವಾಲಿದರು.

About the author

ಕನ್ನಡ ಟುಡೆ

Leave a Comment