ರಾಷ್ಟ್ರ ಸುದ್ದಿ

ಲೋಕಾ ಸಮರ: ಕೈ ವಿರುದ್ಧ ಮುನಿಸಿಕೊಂಡ ಸಿದು, ಪ್ರಚಾರಕ್ಕೆ ಗೈರು

ಅಮೃತಸರ: ಪುಲ್ವಾಮ ದಾಳಿ ಕುರಿತಂತೆ ಹೇಳಿಕೆ ನೀಡಿ ದೇಶದ ಜನತೆಯ ಆಕ್ರೋಶಕ್ಕೆ ತುತ್ತಾಗಿದ್ದ ನವಜೋತ್ ಸಿಂಗ್ ಸಿದು, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟರೇ ಎಂಬ ಮಾತುಗಳು ಕೇಳಿಬರುತ್ತಿದೆ. ಲೋಕಸಭಾ ಚುನಾವಣೆಗೆ ಇನ್ನು ಕೇವಲ 19 ದಿನಗಳು ಮಾತ್ರ ಬಾಕಿ ಇದ್ದು, ಈ ಹಂತದಲ್ಲಿ ಎಲ್ಲ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸುತ್ತಿವೆ. ಅಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದತೆ ಪಕ್ಷದ ಎಲ್ಲ ರಾಜಕೀಯ ಮುಖಂಡರು, ಸಚಿವರು, ಶಾಸಕರು ಸೇರಿದಂತೆ ಎಲ್ಲರೂ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಅತ್ತ ಪಂಜಾಬ್ ನಲ್ಲಿ ಮಾತ್ರ ಸಚಿವ ನವಜೋತ್ ಸಿಂಗ್ ಸಿಧು ಪ್ರಚಾರ ಕಾರ್ಯದಿಂದ ದೂರುವುಳಿದು ಅಚ್ಚರಿ ಮೂಡಿಸಿದ್ದಾರೆ.
ಅಲ್ಲದೇ ಸಿಧು ಮೊಬೈಲ್ ಕೂಡ ನಾಟ್ ರೀಚೆಬಲ್ ಆಗಿದ್ದು, ಸಿಧು ಯಾರ ಕೈಗೂ ಸಿಗುತ್ತಿಲ್ಲ. ಹೀಗಾಗಿ ಸಿಧು ತಮ್ಮದೇ ನಾಯಕರ ವಿರುದ್ಧ ಮುನಿಸಿಕೊಂಡರೇ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದೇ ಕಾರಣಕ್ಕೆ ಸಿಧು ಪಕ್ಷದ ಪ್ರಚಾರ ಕಾರ್ಯದಿಂದ ದೂರವುಳಿದ್ದಾರೆ ಎನ್ನಲಾಗಿದೆ.
ಸಿಧು ಕೋಪಕ್ಕೆ ಕಾರಣವೇನು?: ಇನ್ನು ಸಿಧು ಕೋಪಕ್ಕೆ ಪಕ್ಷ ಅವರನ್ನು ನಿರ್ಲಕ್ಷಿಸಿದ್ದೇ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಬಿಜೆಪಿಯಲ್ಲಿ ಸಿಧು, ಅಮೃತಸರ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರಗೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಳಿಕ ನಡೆದ ಪಂಜಾಬ್ ವಿಧಾನಸಭೆ ಚುನಾವಣೆ ಬಳಿಕ ಗೆದ್ದ ಸಿಧು ಸಚಿವರೂ ಕೂಡ ಆಗಿದ್ದರು. ಬಳಿಕ ಪುಲ್ವಾಮ ಉಗ್ರ ದಾಳಿ ಸಂಬಂಧ ಪಾಕ್ ಪರ ಹೇಳಿಕೆ ನೀಡಿ ಆಕ್ರೋಶಕ್ಕೆ ತುತ್ತಾಗಿದ್ದರು. ಸಿಧು ವಿರುದ್ಧ ಅವರದೇ ಪಕ್ಷದ ಪ್ರಮುಖ ಮುಖಂಡ ಹಾಗೂ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡ ಕಿಡಿಕಾರಿದ್ದರು. ಇದರಿಂದ ಸಿಧು ಒತ್ತಡಕ್ಕೆ ಒಳಗಾಗಿದ್ದರು.
ಇದೀಗ ಲೋಕಸಭಾ ಚುನಾವಣೆಯಲ್ಲಿ ಪಕ್ಷ ತಮ್ಮ ಪತ್ನಿಗೆ ಟಿಕೆಟ್ ನೀಡಿಲ್ಲ ಎಂದು ಸಿಧು ಮುನಿಸಿಕೊಂಡಿದ್ದು, ಸಿಧು ಪತ್ನಿಗೆ ಚಂಡೀಘಡದಿಂದ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಪವನ್ ಬನ್ಸಾಲ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಅಂತೆಯೇ ನವಜೋತ್ ಸಿಂಗ್ ಸಿಧು ಹೆಸರನ್ನು ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಿಂದಲೂ ಕೈ ಬಿಡಲಾಗಿದ್ದು, ಇದೇ ಕಾರಣಕ್ಕೆ ಸಿಧು ಪಕ್ಷದ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment