ಪರಿಸರ

ವರುಣನ ಅಬ್ಬರಕ್ಕೆ ಹಲವೆಡೆ ಜನಜೀವನ ಅಸ್ತವ್ಯಸ್ತ

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಹಲವೆಡೆ ಭಾನುವಾರವೂ ಮಳೆ ಅಬ್ಬರ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾನುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24ತಾಸುಗಳ ಅವಧಿಯಲ್ಲಿ ಮೂಲ್ಕಿಯಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ 28 ಸೆಂ.ಮೀ. ಮಳೆ ಸುರಿಯಿತು.

ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಸುರಿದ ಮಳೆಯ ಪ್ರಮಾಣ (ಸೆಂ.ಮೀ.ಗಳಲ್ಲಿ): ಮಾಣಿ 20, ಆಗುಂಬೆ 14, ಪುತ್ತೂರು, ಕ್ಯಾಸಲ್‌ ರಾಕ್‌ ತಲಾ 13, ಹೊನ್ನಾವರ, ಗೋಕರ್ಣ, ನಾಪೋಕ್ಲು, ಶೃಂಗೇರಿ ತಲಾ 8, ಅಂಕೋಲಾ,ಕಾರವಾರ, ಕಮ್ಮರಡಿ, ಕಳಸ, ಕೊಟ್ಟಿಗೆಹಾರ,ಜಯಪುರ ತಲಾ 7 ಸೆಂ.ಮೀ. ಮಳೆಯಾಗಿದೆ.

ಶೃಂಗೇರಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ವಾರಾಂತ್ಯವಾಗಿದ್ದರಿಂದ ಶ್ರೀ ಶಾರದಾ ಪೀಠಕ್ಕೆ ಆಗಮಿಸಿದ್ದ ಪ್ರವಾಸಿಗರು ಮಳೆಯಿಂದ ತೊಂದರೆಗೆ ಸಿಲುಕುವಂತಾಯಿತು. ತುಂಗಾನದಿಯಲ್ಲಿ ನೀರಿನ ಮಟ್ಟ ಹೆಚ್ಚಿದೆ. ಕಳಸ, ಕುದುರೆಮುಖ ಭಾಗದಲ್ಲಿ ಯೂ ಮಳೆ ನಿರಂತರವಾಗಿ ಸುರಿಯುತ್ತಿದೆ.

ಮುಳ್ಳಯ್ಯನಗಿರಿಯಲ್ಲಿ ಗುಡ್ಡಕುಸಿತ: ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನಗಿರಿಗೆ ಸಾಗುವ ಮಾರ್ಗದಲ್ಲಿ ಅಲ್ಲಲ್ಲಿ ಮಣ್ಣು ಕುಸಿದು ಬಂಡೆಕಲ್ಲುಗಳು ರಸ್ತೆಗೆ ಬೀಳುತ್ತಿವೆ. ಹೀಗಾಗಿ ಪ್ರವಾಸಕ್ಕೆ ಬಂದ ಪ್ರವಾಸಿಗರು ಆತಂಕದಲ್ಲೇ ಸಂಚರಿಸುತ್ತಿದ್ದಾರೆ.

ಪ್ರವಾಹ ಇಳಿಮುಖ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಇದರಿಂದ ಪ್ರಮುಖ ನದಿಗಳಾದ ಕೃಷ್ಣಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಸ್ವಲ್ಪಮಟ್ಟಿನ ಇಳಿಕೆಯಾಗಿದೆ. ಆದರೆ ಅಂಬೋಲಿ ಘಟ್ಟ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಹಿಡಕಲ್‌ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಕೃಷ್ಣಾ ನದಿಯಲ್ಲಿ ಒಳಹರಿವಿನ ಪ್ರಮಾಣ ಕಡಿಮೆಯಾಗಿರುವುದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್‌, ಮಲಿಕವಾಡ- ದತ್ತವಾಡ ಬ್ಯಾರೇಜ್‌ ಸಂಚಾರಕ್ಕೆ ಮುಕ್ತವಾಗಿವೆ. ಇದೇ ವೇಳೆ ಹಿಪ್ಪರಗಿ ಬ್ಯಾರೇಜ್‌ ಮೂಲಕ 55000 ಕ್ಯೂಸೆಕ್‌ ನೀರನ್ನು ಆಲಮಟ್ಟಿಗೆ ಹರಿದು ಬಿಡಲಾಗುತ್ತಿದೆ. ಅಂಬೋಲಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಾರಂಭಿಸಿದೆ.

ಇಂದು ಶಾಲಾ-ಕಾಲೇಜುಗಳಿಗೆ ರಜೆ : ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಬಿಟ್ಟು ಬಿಟ್ಟು ಮಳೆಯಾಗಿದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಮುಂಜಾಗೃತಾ ದೃಷ್ಟಿಯಿಂದ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾಪಡೆ) ತಂಡ ಕೂಡ ಮಂಗಳೂರಿಗೆ ಆಗಮಿಸಿದೆ. ತೀವ್ರ ಮಳೆ ಹಿನ್ನೆಲೆಯಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲೆಗಳಿಗೆ ಹಾಗೂ ಪಪೂ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ದ್ವಿತೀಯ ಪಿಯು ಪೂರಕ ಪರೀಕ್ಷೆಗಳು ನಿಗದಿಯಂತೆ ನಡೆಯಲಿದೆ.

ಸದಾನಂದ ಗೌಡ, ಕಟೀಲು ಭೇಟಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಪುತ್ತೂರಿನಲ್ಲಿ ತಡೆಗೋಡೆ ಕುಸಿದು ಅಜ್ಜಿ, ಮೊಮ್ಮಗ ಮೃತಪಟ್ಟ ಹೆಬ್ಟಾರಬೈಲು ಮನೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಶಾಸಕ ಸಂಜೀವ ಮಠಂದೂರು ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಸುರಿದ ಮಳೆಗೆ ಶಾಂಭವಿ ಮತ್ತು ನಂದಿನಿ ನದಿ ಉಕ್ಕಿ ಹರಿದು ಕಿನ್ನಿಗೋಳಿ ಸುತ್ತಮುತ್ತ ಜಲಾವೃತವಾಗಿದ್ದು, ಭಾನುವಾರ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಬಳುRಂಜೆಯಲ್ಲಿ ಜಲಾವೃತಗೊಂಡಿದ್ದ ಮುಗೇರ ಬೈಲು ಸಂಪರ್ಕ ಕಲ್ಪಿಸುವ ರಸ್ತೆ ಈಗ ತೆರವಾಗುತ್ತಿದೆ. ನೀರಿನ ಮಟ್ಟ ಇನ್ನೂ ಏರಿಕೆಯಾದ ಕಾರಣ ಕಟೀಲಿನ ಮಿತ್ತಬೈಲಿನಲ್ಲಿ ಹಲವು ಕುಟುಂಬಗಳನ್ನು ಶನಿವಾರ ರಾತ್ರಿ ಸ್ಥಳಾಂತರಿಸಲಾಗಿದೆ.

 

About the author

ಕನ್ನಡ ಟುಡೆ

Leave a Comment