ರಾಜಕೀಯ

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶತ್ರುಘ್ನ ಸಿನ್ಹಾ ಸ್ಪರ್ಧೆ

ಲಖನೌ: ಪ್ರಧಾನಮಂತ್ರಿ ನರೇಂದ್ರ ಮೋದಿ ಕಟುಟೀಕಾಕಾರರಲ್ಲಿ ಒಬ್ಬರಾಗಿರುವ ನಟ ಹಾಗೂ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧವೇ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಲ್ಲಿ ಮೋದಿ ಸ್ಪರ್ಧಿಸುವುದು ಖಚಿತವಾದರೆ, ಅಲ್ಲಿ ಪ್ರಧಾನಿ ವಿರುದ್ಧ ಸಿನ್ಹಾ ಅವರನ್ನು ಕಣಕ್ಕೆ ಇಳಿಸಲು ಸಮಾಜವಾದಿ ಪಕ್ಷದ ಚಿಂತನೆ ನಡೆಸಿದೆ ಎನ್ನಲಾಗಿದೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿ 2ನೇ ಸ್ಥಾನಗಳಿಸಿದ್ದ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಬೆಂಬಲವನ್ನೂ ಕೋರಲು ಸಮಾಜವಾದಿ ಪಕ್ಷ ಚಿಂತಿಸಿದೆ ಎಂದು ವರದಿಗಳು ತಿಳಿಸಿವೆ.
ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಹುಟ್ಟುಹಬ್ಬ ಹಿನ್ನಲೆಯಲ್ಲಿ ಲಖನೌನಲ್ಲಿ ಸಮಾಜವಾದಿ ಪಕ್ಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಹಾಗೂ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರು ಪಾಲ್ಕೊಂಡಿದ್ದರು. ಈ ಹಿನ್ನಲೆಯಲ್ಲಿ ಸಮಾಜವಾದಿ ಪಕ್ಷದ ವತಿಯಿಂದ ಪ್ರಧಾನಿ ಮೋದಿ ವಿರುದ್ಧ ಶತ್ರುಘ್ನ ಸಿನ್ಹಾ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುತ್ತಾರೆಂಬ ಮಾತುಗಳು ಒಂದೆಡೆ ಕೇಳಿ ಬರುತ್ತಿವೆ. ಕಾರ್ಯಕ್ರಮ ಅಂತ್ಯಗೊಂಡ ಬಳಿಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶತ್ರುಘ್ನ ಸಿನ್ಹಾ ಹಾಗೂ ಯಶವಂತ್ ಸಿನ್ಹಾ ಜೊತೆಗೆ ಸಭೆಯೊಂದನ್ನು ನಡೆಸಿದ್ದು, ಸಬೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಸಭೆ ಕುರಿತಂತೆ ಹೆಸರನ್ನು ಬಹಿರಂಗ ಪಡಿಸಿದ ಸಮಾಜವಾದಿ ಪಕ್ಷದ ನಾಯಕರೊಬ್ಬರು ಹೇಳಿಕೆ ನೀಡಿದ್ದು, ಅಖಿಲೇಶ್ ಯಾದವ್ ಅವರ ದೃಷ್ಟಿ ಸಿನ್ಹಾ ಅವರ ಮೇಲೆ ಬಿದ್ದಿದೆ. ಆದರೆ, ಈ ಕುರಿತು ಇನ್ನೂ ದೃಢ ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಶತ್ರುಘ್ನ ಸಿನ್ಹಾ ಅವರು ಸಾರ್ವಜನಿಕವಾಗಿ ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಹಲವು ದಿನಗಳಿಂದಲೂ ವಾಗ್ದಾಳಿ ನಡೆಸುತ್ತಲೇ ಇದ್ದು, ಪಕ್ಷ ಮಾತ್ರ ಈವರೆಗೂ ಅವರ ವಿರುದ್ಧ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ.

About the author

ಕನ್ನಡ ಟುಡೆ

Leave a Comment